ಹಾಸನದ ಪ್ರಸಿದ್ಧ ದೇವತೆ ಹಾಸನಾಂಬೆ ದೇವಿ ದರ್ಶನೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ. ವರ್ಷದಲ್ಲಿ ಒಂದೇ ಬಾರಿ ಸಾರ್ವಜನಿಕರಿಗೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಈ ಬಾರಿ ಬುಧವಾರ ಅಧಿಕೃತವಾಗಿ ಮುಚ್ಚಲ್ಪಟ್ಟಿದೆ.ಈ ಕುರಿತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
2025ನೇ ಸಾಲಿನ ಹಾಸನಾಂಬೆ ದರ್ಶನೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ. ಶಾಸ್ತ್ರದ ಪ್ರಕಾರ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಜಿಲ್ಲೆಯ ಶಾಸಕರು, ಸಂಸದರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದಿಂದ ಉತ್ಸವ ಯಾವುದೇ ಅಡಚಣೆಯಿಲ್ಲದೆ ನಡೆದಿದೆ. ಜನಸಂದಣಿ ಇದ್ದರೂ ನೂಕುನುಗ್ಗಲು ಇಲ್ಲದೆ ಭಕ್ತರು ಶಾಂತಿಯುತವಾಗಿ ದರ್ಶನ ಪಡೆದಿದ್ದಾರೆ. ಎಲ್ಲ ಭಕ್ತರೂ ಸಂತೋಷದಿಂದ ಹಾಸನಾಂಬೆ ಆಶೀರ್ವಾದ ಪಡೆದಿದ್ದಾರೆ ಎಂದರು.
ಸಚಿವರ ಮಾಹಿತಿ ಪ್ರಕಾರ, ಈ ವರ್ಷ 26,13,000 ಭಕ್ತರು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದಾರೆ. ಟಿಕೆಟ್ ಹಾಗೂ ಲಡ್ಡು ಮಾರಾಟದ ಮೂಲಕ ₹2,18,20,000 ರೂ. ಆದಾಯ ಸಂಗ್ರಹವಾಗಿದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರು.ಮುಂದಿನ ಬಾರಿ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು 29 ಅಕ್ಟೋಬರ್ 2026 ರಿಂದ 11 ನವೆಂಬರ್ 2026 ರವರೆಗೆ ಭಕ್ತರಿಗೆ ತೆರೆಯಲಾಗತ್ತೆ ಎಂದಿದ್ದಾರೆ.
ಸಚಿವ ಕೃಷ್ಣಭೈರೇಗೌಡ ಅವರು ಉತ್ಸವ ಯಶಸ್ವಿಗೆ ಶ್ರಮ ವಹಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದರು. ಹಾಸನಾಂಬೆ ದೇವಿ ದರ್ಶನದ ಮೂಲಕ ಹಾಸನದ ಕೀರ್ತಿ ರಾಜ್ಯದ ಮೂಲೆಮೂಲೆಗೂ ಹರಡಿದೆ ಎಂದು ಹೇಳಿದರು.
ವರದಿ : ಲಾವಣ್ಯ ಅನಿಗೋಳ