ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ, ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಯತೀಂದ್ರ ಮೂಲಕ ಸಿದ್ದರಾಮಯ್ಯ ಉತ್ತರಾಧಿಕಾರಿಯ ದಾಳ ಉರುಳಿಸಿದ್ದಾರಾ ಎಂಬ ಕುತೂಹಲವೂ ಕೆರಳಿಸಿದೆ. ಅಷ್ಟಕ್ಕೂ ಈ ಬಾಣ ಯಾರಿಗೆ ತಲುಪಲಿದೆ ಎಂಬುವುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.
ಸತೀಶ್ ಜಾರಕಿಹೊಳಿ ಹೆಸರನ್ನು ಸಿದ್ದರಾಮಯ್ಯ ಪರೋಕ್ಷವಾಗಿ ಮುನ್ನಲೆಗೆ ತಂದಿದ್ದಾರೆಂಬ ಚರ್ಚೆ, ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ಸಿಎಂ ಸ್ಥಾನಕ್ಕೆ ಡಿಕೆಶಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಸಿಎಂ ಸ್ಥಾನ ಅಲಂಕರಿಸಲು ಒಂದಿಷ್ಟು ಅಡ್ಡಿ ಆತಂಕಗಳು ಪಕ್ಷದಲ್ಲಿವೆ.
ಡಿಕೆಶಿ ನಾಯಕತ್ವವನ್ನು ಅಷ್ಟೊಂದು ಸುಲಭವಾಗಿ ಸಿದ್ದರಾಮಯ್ಯ ಬಣ ಒಪ್ಪುತ್ತಿಲ್ಲ. ಬದಲಾಗಿ ಇತರ ಆಯ್ಕೆಗಳತ್ತ ಎದುರು ನೋಡುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ನಾಯಕತ್ವ ತ್ಯಾಗ ಮಾಡಬೇಕಾಗಿ ಬಂದಲ್ಲಿ, ಮುಂದಿನ ಆಯ್ಕೆ ಯಾರಾಗಬೇಕು ಎಂಬ ಪ್ರಶ್ನೆ ಶುರವಾಗಿದೆ. ಹೀಗಿರುವಾಗ ಸತೀಶ್ ಜಾರಕಿಹೊಳಿ ಸೇಫ್ ಆಯ್ಕೆ ಎಂಬುವುದು ಸಿದ್ದರಾಮಯ್ಯ ಆಪ್ತರ ಅಭಿಪ್ರಾಯವಾಗಿದೆ.
ಈ ನಿಟ್ಟಿನಲ್ಲಿ ಯತೀಂದ್ರ ಹೇಳಿಕೆ ಆಕಸ್ಮಿಕವಲ್ಲ. ಬದಲಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳ ಫಲಶ್ರುತಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಪದೇ ಪದೇ ದೆಹಲಿಗೆ ತೆರಳುತ್ತಿದ್ದಾರೆ. ಜೊತೆಗೆ ದೇವಸ್ಥಾನಗಳಿಗೂ ನಿರಂತರ ಭೇಟಿ ನೀಡುತ್ತಿದ್ದಾರೆ. ಸಂಕಲ್ಪ ಪೂಜೆಯನ್ನು ನಡೆಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಗೆ ಬಂದಿದ್ದು, ಸಿದ್ದರಾಮ್ಯ ಗೇಮ್ ಪ್ಲಾನ್ ಎನ್ನಲಾಗ್ತಿದೆ.