ಮೈಸೂರು: ಭ್ರೂಣ ಪತ್ತೆ ಹಾಗೂ ಹತ್ಯೆ ಎಂಬ ಕಾನೂನುಬಾಹಿರ ಕೃತ್ಯಕ್ಕೆ ಮೈಸೂರಿನಲ್ಲೊಂದು ಗ್ಯಾಂಗ್ ಬಲೆಯೊಡ್ಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮೆಲ್ಲಹಳ್ಳಿ ಸಮೀಪದ ಹುನಗನಹಳ್ಳಿ ಗ್ರಾಮದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ದಾಳಿ ನಡೆಸಿ, ಓರ್ವ ಮಹಿಳೆ ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಂಗಲೆಯಲ್ಲೇ ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ ಮಾಡಿ, ಹೆಣ್ಣು ಭ್ರೂಣ ಎಂದು ತಿಳಿದರೆ ಹತ್ಯೆ ಮಾಡಲಾಗುತ್ತಿತ್ತು. ಪ್ರತಿ ಪತ್ತೆಗೆ 25 ಸಾವಿರ ರೂ., ಭ್ರೂಣ ಹತ್ಯೆಗೆ 30 ಸಾವಿರ ರೂ. ವಸೂಲಿ ಮಾಡಲಾಗುತ್ತಿತ್ತು. ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ನಗದು, ಡೈರಿ, ಔಷಧಿಗಳು ಹಾಗೂ ಕಿಟ್ಗಳು ಪತ್ತೆಯಾಗಿವೆ.
ಆರೋಗ್ಯ ಇಲಾಖೆಯ ವಿವೇಕ್ ದೊರೈ ನೇತೃತ್ವದ ತಂಡ, ವರುಣ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದೆ. ಬಂಧಿತರಲ್ಲಿ ನರ್ಸ್ ಮಹಿಳೆಯೊಬ್ಬಳೂ ಇದ್ದಾರೆ. ಹಣದಾಸೆಯಿಂದ ಮಾನವೀಯ ಮೌಲ್ಯ ಮರೆತು ಈ ಪಾಪದ ಕೃತ್ಯ ಕೈಗೊಂಡಿರುವುದು ಮೈಸೂರಿನ ಸಾಂಸ್ಕೃತಿಕ ಚರಿತ್ರೆಗೆ ಕಳಂಕ ತಂದಿದೆ.
ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಳದಲ್ಲಿ ಇಬ್ಬರು ಗರ್ಭಿಣಿಯರೂ ಪತ್ತೆಯಾಗಿದ್ದು, ಅವರು ಕೂಡ ಭ್ರೂಣ ಲಿಂಗ ಪತ್ತೆಗಾಗಿ ಆಗಮಿಸಿದ್ದರೆಂದು ತಿಳಿದುಬಂದಿದೆ. ಅವರಲ್ಲಿ ಓರ್ವ ಮಹಿಳೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಇದ್ದು, ಈ ಬಾರಿ ಯಾವ ಮಗು ಎಂದು ತಿಳಿದುಕೊಳ್ಳಲು ಬಂದಿದ್ದರು ಎನ್ನಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ