ಕೃಷಿ ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್, ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸಹಕಾರಿ ಕ್ಷೇತ್ರದ ಮೂಲಕ ರಾಜಕೀಯ ಪಯಣ ಆರಂಭಿಸಲು ತಯಾರಾಗಿದ್ದು, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಮಗನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಸಚಿವ ಚಲುವರಾಯಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಈ ಹಿಂದೆ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ನೇರವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ರು. ಇದನ್ನು ಗಮನಿಸಿರುವ ಚಲುವರಾಯಸ್ವಾಮಿ, ಸ್ಥಳೀಯ ರಾಜಕೀಯದಿಂದ್ಲೇ ಮಗನಿಗೆ ರಾಜಕೀಯ ಪಾಠ ಹೇಳಿಕೊಡಲು ಮುಂದಾಗಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಸಚಿನ್ ಚಲುವರಾಯಸ್ವಾಮಿ, ನಾಗಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಮಟ್ಟದಿಂದ ಜಿಲ್ಲಾ ಸಹಕಾರಿ ರಾಜಕೀಯದತ್ತ ಇದೀಗ ಪಾದಾರ್ಪಣೆಗೆ ಸಜ್ಜಾಗಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಚಿನ್ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಸಚಿವ ಚಲುವರಾಯಸ್ವಾಮಿ ತಮ್ಮ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟು, ಕೆ.ಆರ್.ಪೇಟೆಯಿಂದ ಸ್ಪರ್ಧಿಸಬಹುದೆಂಬ ಊಹಾಪೋಹಗಳು ಕೂಡ ಹರಿದಾಡುತ್ತಿವೆ. ವಿಧಾನಸಭಾ ಸ್ಪರ್ಧೆ ಸಾಧ್ಯವಾಗದಿದ್ರೆ, ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಚಿಂತನೆ ಕೂಡ ಇದೆ ಎನ್ನಲಾಗಿದೆ.
ಡಿಸಿಸಿ ಬ್ಯಾಂಕ್‌ಗೆ ನಾಮಪತ್ರ ಸಲ್ಲಿಸಿದ ಬಳಿಕ ಸಚಿನ್ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ನಾನು ಈ ಕ್ಷೇತ್ರಕ್ಕೆ ಬರಬೇಕೆಂಬ ಆಲೋಚನೆ ಇರಲಿಲ್ಲ. ಗೊತ್ತಿಲ್ಲದೇ ಶುರುವಾದ ರಾಜಕೀಯದ ಜರ್ನಿ, ಇಲ್ಲಿಯವರೆಗೂ ಬಂದಿದೆ. ಪ್ರತಿದಿನವೂ ಕಲಿಯುವುದು ಇದ್ದೇ ಇದೆ. ತಳಮಟ್ಟದ ರಾಜಕೀಯದಲ್ಲಿ ಸಾಮಾನ್ಯ ಜನರೊಂದಿಗೆ ಒಡನಾಟ ಜಾಸ್ತಿ ಇರುತ್ತದೆ. ಅವರ ಜೊತೆ ಬೆರೆಯುತ್ತಾ ಅವರ ಸಮಸ್ಯೆ ಬಗೆಹರಿಸುವಲ್ಲಿ ಕೆಲಸ ಮಾಡ್ತೀವಿ. ನಮ್ಮ ಕೈಯಲ್ಲಾದ ಅಳಿಲು ಸೇವೆ ಮಾಡುವುದಕ್ಕೆ ಇದೊಂದು ಅವಕಾಶ.
ಎಂಎಲ್‌ಎ ಚುನಾವಣೆ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ. ಸಿನಿಮಾ ಮಾಡುವಾಗ ಅದಕ್ಕಾಗಿ ಕೆಲಸ ಮಾಡ್ತಿದ್ದೆ. ಕ್ರಿಕೆಟ್ ಅನ್ನೋದು ನನಗೆ ಫ್ಯಾಷನ್ ಇದ್ದಂತೆ. ಆದರೆ, ರಾಜಕೀಯ ಅನ್ನೋದು ಜವಾಬ್ದಾರಿ. ಲಘುವಾಗಿ ತೆಗೆದುಕೊಳ್ಳಲು ಆಗಲ್ಲ. ತಂದೆಯಿಂದ ಬಂದಿರುವಂತದ್ದು, ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ ಎಂದು, ಸಚಿನ್ ಚಲುವರಾಯಸ್ವಾಮಿ ಹೇಳಿದ್ರು.

