ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಅಕ್ಕ-ತಂಗಿ ಮೃತಪಟ್ಟಿರುವ ಘಟನೆ, ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ. ಅಲ್ತಾಫ್ ಪಾಷ ಕುಟುಂಬ ನಿರ್ವಹಣೆಗಾಗಿ, ಪತ್ನಿ- ನಾಲ್ವರು ಹೆಣ್ಣುಮಕ್ಕಳೊಡನೆ ಬೆಟ್ಟದಪುರದಿಂದ ಪಿರಿಯಾಪಟ್ಟಣಕ್ಕೆ ಬಂದು, ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದರು. ವಾರದ ಹಿಂದೆಯಷ್ಟೇ ಪಿರಿಯಾಪಟ್ಟಣದ ಜೋನಿಗರ ಬೀದಿಯಲ್ಲಿ ಹೊಸ ಬಾಡಿಗೆ ಮನೆಗೆ ಬಂದಿದ್ದರು.
ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಸಹೋದರಿಯರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಸ್ನಾನದ ಕೋಣೆಯಲ್ಲಿ ಗ್ಯಾಸ್ ಗೀಸರ್ ಆನ್ ಮಾಡಿದ ತಕ್ಷಣ, ಅದರಿಂದ ಬಿಡುಗಡೆಯಾದ ವಿಷಾನಿಲ ಸೇವನೆಯಿಂದ ಉಸಿರಾಡಲು ತೊಂದರೆಯಾಗಿದೆ. ಅಲ್ತಾಫ್ ಪಾಷಾ ಅವರ 2ನೇ ಮಗಳು 23 ವರ್ಷದ ಗುಲ್ಫಮ್ ತಾಜ್ ಮತ್ತು 4ನೇ ಮಗಳಾದ 21 ವರ್ಷದ ಸಿಮ್ರಾನ್ ತಾಜ್ ಉಸಿರುಗಟ್ಟಿ ಒದ್ದಾಡಿದ್ದಾರೆ. ಆಗ ಕಿಟಕಿ, ಬಾಗಿಲು ಎಲ್ಲವೂ ಮುಚ್ಚಿತ್ತು.
ಎಷ್ಟೇ ಹೊತ್ತಾದರೂ ಸ್ನಾನದ ಕೋಣೆಯಿಂದ ಅಕ್ಕ-ತಂಗಿ ಇಬ್ಬರು ಹೊರಗೆ ಬರದಿದ್ದಾಗ, ಕುಟುಂಬಸ್ಥರು ತೆರಳಿ ನೋಡಿದಾಗ ಇಬ್ಬರೂ ಕುಸಿದು ಬಿದ್ದಿದ್ದರು. ಇಬ್ಬರು ಸಹೋದರಿಯರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಕ್ಕ-ತಂಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಳಿಕ ಬೆಟ್ಟದಪುರದ ಗ್ರಾಮದಲ್ಲಿ ಅಂತ್ಯಕ್ರಿಯೆ ನೆಡೆಸಲಾಗಿದೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಬನ್ ಮೋನಾಕ್ಸೆಡ್ ಸೇವನೆಯಿಂದ ಯುವತಿಯರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶವ ಪರೀಕ್ಷೆ ನಡೆಸಿ, ವರದಿಗೆ ಕಳುಹಿಸಲಾಗಿದೆ. ಗ್ಯಾಸ್ ಗೀಸರ್ ಬಳಸುವಾಗ ಜನರು ಎಚ್ಚರಿಕೆಯಿಂದ ಬಳಕೆ ಮಾಡಬೇಕು. ವೆಂಟಿಲೇಟರ್ ಇರುವ ಕಡೆ ಗ್ಯಾಸ್ ಗೀಸರ್ ಬಳಕೆ ಮಾಡಬೇಕೆಂದು ವೈದ್ಯ ಡಾ. ಪ್ರಮೋದ್ ಕುಮಾರ್ ಸಲಹೆ ನೀಡಿದ್ದಾರೆ.

