ಸಿಎಂ ಉತ್ತರಾಧಿಕಾರಿ, ನವೆಂಬರ್ ಕ್ರಾಂತಿ ವದಂತಿ ನಡುವೆ ಸಿದ್ದರಾಮಯ್ಯರ ನಡೆ ಕುತೂಹಲ ಕೆರಳಿಸಿದೆ. ಇದೇ ನವೆಂಬರ್ 15ರಂದು ಸಿಎಂ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ನವೆಂಬರ್ 15ರಿಂದ 3 ದಿನ ದಿಲ್ಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ಈ ಪ್ರವಾಸ ರಾಜ್ಯ ರಾಜಕೀಯದ ಕುತೂಹಲಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ನವೆಂಬರ್ 14ರಂದು ಪ್ರಕಟವಾಗಲಿದೆ. ಅದಾದ ಮರುದಿನವೇ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು, ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಸಿಕ್ಕಿದೆ.
ಆದರೆ, ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆಂದು ತೆರಳುತ್ತಿರುವವರು, 3 ದಿನ ಅಲ್ಲೇ ಉಳಿದುಕೊಳ್ಳುತ್ತಿರುವುದು, ಭಾರೀ ಕುತೂಹಲ ಮೂಡಿಸಿದೆ. ಈ ಮೂರು ದಿನಗಳ ಭೇಟಿ ವೇಳೆ ಹೈಕಮಾಂಡ್ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆ ಹೆಚ್ಚಿದೆ. ಈ ವೇಳೆ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕುರಿತು, ಮಹತ್ವದ ಮಾತುಕತೆ ನಡೆಯಲಿದೆ ಎಂದೇ ಮೂಲಗಳು ಹೇಳುತ್ತವೆ.
ಇದೇ ವೇಳೆ, ರಾಜ್ಯ ಕಾಂಗ್ರೆಸ್ ನಾಯಕರಿಂದ ಕೇಳಿ ಬಂದಿರುವ ಅನಗತ್ಯ ಹೇಳಿಕೆಗಳ ಬಗ್ಗೆಯೂ, ಹೈಕಮಾಂಡ್‌ನೊಂದಿಗೆ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ. ನಿನ್ನೆಯಷ್ಟೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ, ಬಿಹಾರ ಚುನಾವಣೆ ಬಳಿಕ ಭಾರೀ ಬದಲಾವಣೆಯಾಗಲಿದೆ ಅಂತಾ ಹೇಳಿದ್ರು. ಇದಕ್ಕೆ ಪುಷ್ಠಿ ಕೊಡುವಂತೆ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಅದೂ ಕೂಡ ಬಿಹಾರ ಚುನಾವಣಾ ಫಲಿತಾಂಶದ ಬಳಿಕ ಅನ್ನೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

