ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆ ಸರಿಯಾಗಿಯೇ ತೋರಿಬಂದಿದ್ದು, ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಧಾರಾಕಾರ ಮಳೆಯಿಂದ ಜನತೆ ಹೈರಾಣರಾಗಿದ್ದಾರೆ. ನಿರಂತರವಾಗಿ ಸುರಿದ ಮಳೆಯ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಧಾರವಾಡದ ಟೋಲ್ ನಾಕಾ ಬಳಿ ರಸ್ತೆಯ ಮೇಲೆ ನೀರು ಹರಿದು, ಸಾರ್ವಜನಿಕರು ರಸ್ತೆ ದಾಟಲು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಕಳೆದ ಕೆಲವು ದಿನಗಳಿಂದ ಸ್ವಲ್ಪ ವಿರಾಮ ಪಡೆದಿದ್ದ ಮಳೆ, ಗುರುವಾರ ಸಂಜೆ ಮತ್ತೆ ಭಾರೀ ತೀವ್ರತೆಯೊಂದಿಗೆ ಸುರಿಯಿತು. ಗುಡುಗು ಸಹಿತ ಸುರಿದ ಈ ಮಳೆಯು ತಗ್ಗು ಪ್ರದೇಶಗಳ ನಿವಾಸಿಗಳಿಗೆ ತುಂಬಾ ತೊಂದರೆ ತಂದಿತು. ಎನ್‌ಟಿಟಿಎಫ್ ಬಳಿಯ ದೈವಜ್ಞ ಕಲ್ಯಾಣ ಮಂಟಪದ ಎದುರು ಸುಮಾರು 3 ರಿಂದ 4 ಅಡಿ ನೀರು ನಿಂತು, ವಾಹನ ಸಂಚಾರ ಗಂಟೆಗಳ ಕಾಲ ಸ್ಥಗಿತಗೊಂಡಿತು.
ಮಳೆ ನೀರು ಮತ್ತು ಚರಂಡಿ ನೀರು ಮಿಶ್ರಣವಾಗಿ ಹರಿದು, ಜನರ ಜೀವನ ಅಸ್ತವ್ಯಸ್ತಗೊಂಡಿತು. ಹುಬ್ಬಳ್ಳಿ–ಧಾರವಾಡ ಮಧ್ಯದ BRTS ಮಾರ್ಗ ಹಾಗೂ ಮಿಶ್ರ ಪಥಗಳು ಅನೇಕ ಕಡೆಗಳಲ್ಲಿ ಜಲಾವೃತವಾಗಿದ್ದವು. ಉಣಕಲ್ಲ ಕ್ರಾಸ್, ಶ್ರೀನಗರ ಕ್ರಾಸ್ ಮತ್ತು ಅಮರಗೋಳ ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ಗಂಭೀರ ಅಡಚಣೆ ಉಂಟಾಯಿತು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

