Sunday, October 26, 2025

Latest Posts

ಆಳಂದ ‘ವೋಟ್ ಚೋರಿ’ ಕೇಸ್ನಲ್ಲಿ ಸ್ಫೋಟಕ ತಿರುವು, 75 ಮೊಬೈಲ್ ನಂಬರ್​ಗಳ ದುರ್ಬಳಕೆ!

- Advertisement -

ಆಳಂದ ವಿಧಾನಸಭಾ ಕ್ಷೇತ್ರದ ‘ವೋಟ್ ಚೋರಿ’ ಪ್ರಕರಣದಲ್ಲಿ SIT ಸ್ಫೋಟಕ ಮಾಹಿತಿಯನ್ನು ಬಯಲು ಮಾಡಿದೆ. ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ನಾಲ್ವರು ಆರೋಪಿಗಳು ಒಟ್ಟು 6,018 ನಕಲಿ ಅರ್ಜಿಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಸಲ್ಲಿಸಿದ್ದು, ಪ್ರತಿಯೊಂದು ನಕಲಿ ಅರ್ಜಿಗೆ ₹80 ಪಾವತಿಯಾಗಿತ್ತಂತೆ.

ಆರೋಪಿಗಳು ಸಮಾಜದ ದುರ್ಬಲ ವರ್ಗದ ಜನರ 75 ಮೊಬೈಲ್ ನಂಬರ್‌ಗಳನ್ನು ದುರ್ಬಳಕೆ ಮಾಡಿದ್ದಾರೆ. ಅವರ ಫೋನ್‌ಗಳಿಗೆ ಬಂದ OTP ಬಳಸಿ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಿದ್ದರೆಂದು SIT ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಪ್ರಕರಣವು ರಾಹುಲ್ ಗಾಂಧಿ ಆರೋಪದ ನಂತರ ಹೆಚ್ಚಾಗಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆಯಾಗಿದೆ. ಮತಗಳ್ಳತನ ಆರೋಪದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಗಮನ ಸೆಳೆದಿದೆ. ತನಿಖೆಯ ಪ್ರಕಾರ ಅಕ್ರಮ್, ಅಶ್ಫಾಕ್, ಮುಸ್ತಾಕ್ ಮತ್ತು ನದೀಮ್ ಎಂಬ ನಾಲ್ವರು ಯುವಕರು ಆರೋಪಿಗಳು. ಇವರ ವಯಸ್ಸು 25ರಿಂದ 30 ವರ್ಷಗಳ ನಡುವೆ ಇದೆ. ಅಶ್ಫಾಕ್ ದುಬೈನಲ್ಲಿ ಇದ್ದು, ಭಾರತಕ್ಕೆ ಕರೆತರಲು SIT ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಕಲಬುರಗಿಯ ಒಂದು ಡೇಟಾ ಸೆಂಟರ್‌ನ ಐದು ಕಂಪ್ಯೂಟರ್‌ಗಳ ಮೂಲಕ ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಇವರಲ್ಲಿ ಒಬ್ಬ ಆನ್‌ಲೈನ್ ರಾಜಕೀಯ ಸಮೀಕ್ಷಕ, ಇನ್ನೊಬ್ಬ ಡೇಟಾ ಆಪರೇಟರ್ ಆಗಿದ್ದು, ಉಳಿದ ಇಬ್ಬರು ಅರ್ಜಿಗಳನ್ನು ಆನ್ಲೈನ್‌ನಲ್ಲಿ ಸಲ್ಲಿಸುವ ಕೆಲಸ ಮಾಡುತ್ತಿದ್ದರು.

SIT ವರದಿಯ ಪ್ರಕಾರ, 75 ಮೊಬೈಲ್ ಫೋನ್‌ಗಳ ಮೂಲಕ ಲಾಗಿನ್ ಐಡಿ ರಚನೆ ಮಾಡಲಾಗಿದ್ದು, ಪ್ರತಿಯೊಂದು OTP ಸಕ್ರಿಯಗೊಂಡಿದೆ. OTP ಇಲ್ಲದೆ ಲಾಗಿನ್ ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ, ಈ ಮೊಬೈಲ್ ಸಂಖ್ಯೆಗಳ ಮೂಲಕ OTP ಹೇಗೆ ಲಭ್ಯವಾಯಿತು ಎಂಬುದರ ಬಗ್ಗೆ SIT ತೀವ್ರ ತನಿಖೆ ನಡೆಸುತ್ತಿದೆ.
ಹ್ಯಾಕಿಂಗ್ ಮೂಲಕ OTP ಗಳನ್ನು ಪಡೆಯಲು ಪ್ರಯತ್ನವಾಯಿತೇ, ಅಥವಾ ಆರೋಪಿಗಳಿಗೆ ಒಳಗಿನ ಸಹಕಾರ ದೊರಕಿತೇ ಎಂಬ ಕುರಿತೂ ಪರಿಶೀಲನೆ ನಡೆಯುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss