ಪ್ರಧಾನಿ ನರೇಂದ್ರ ಮೋದಿ ಅವರ 127ನೇ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಈ ಬಾರಿ ವಿಶಿಷ್ಟ ತಂತ್ರಜ್ಞಾನ ಪ್ರಯೋಗದಿಂದ ಗಮನಸೆಳೆದಿದೆ. ಸಾಮಾನ್ಯವಾಗಿ ಹಿಂದಿಯಲ್ಲಿ ಮಾತನಾಡುವ ಪ್ರಧಾನಿಗಳು ಈ ಬಾರಿಯೂ ಹಿಂದಿಯಲ್ಲೇ ಭಾಷಣ ಮಾಡಿದ್ದಾರೆ. ಆದರೆ, ಬೇರೆ ಬೇರೆ ಭಾಷೆಗಳಲ್ಲಿ ಧ್ವನಿ ಡಬ್ ಮಾಡಿ ಪ್ರಸಾರ ಮಾಡಲಾಗಿದೆ. ಕಾರ್ಯಕ್ರಮವನ್ನ ಭಾರತದ ಅನೇಕ ಭಾಷೆಗಳಲ್ಲಿ ಎಐ ತಂತ್ರಜ್ಞಾನದಿಂದ ಡಬ್ ಮಾಡಲಾಗಿದೆ.
ಕೃತಕ ಬುದ್ಧಿಮತ್ತೆ ಬಳಸಿ ಪ್ರಧಾನಿಗಳ ಧ್ವನಿಯಂತೆಯೇ ಧ್ವನಿ ನಿರ್ಮಿಸಿ, ಅದನ್ನು ಕನ್ನಡ, ತಮಿಳು, ಒಡಿಯಾ, ಬೆಂಗಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಸಾರ ಮಾಡಲಾಗಿದೆ. ಕನ್ನಡ ಆವೃತ್ತಿ ಕೇಳಿದಾಗಲೇ ಅದು ನಿಖರವಾಗಿ ನರೇಂದ್ರ ಮೋದಿ ಅವರ ಧ್ವನಿಯೇ ಎಂಬ ಭಾವನೆ ಮೂಡಿಸುವಷ್ಟು ಎಐ ತಂತ್ರಜ್ಞಾನ ಶುದ್ಧವಾಗಿದೆ.
ಈ ವಾರದ ಎಪಿಸೋಡ್ನಲ್ಲಿ ಪ್ರಧಾನಿಗಳು ‘ವಂದೇ ಮಾತರಂ’ ಹಾಡಿನ ರಚನೆಯ 150ನೇ ವಾರ್ಷಿಕೋತ್ಸವದ ಕುರಿತು ಮಾತನಾಡಿದರು. ಅಲ್ಲದೆ ‘ಏಕ್ ಪೇಡ್ ಮಾಕೆ ನಾಮ್’ (ಒಂದು ಮರ, ಅಮ್ಮನ ಹೆಸರಿನಲ್ಲಿ) ಎಂಬ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜನತೆಗೆ ಕರೆ ನೀಡಿದರು.
ಅದೇ ರೀತಿ ಛತ್ತೀಸ್ಗಡ ರಾಜ್ಯದಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಪ್ರೋತ್ಸಾಹ ನೀಡುತ್ತಿರುವ ‘ಗಾರ್ಬೇಜ್ ಕಫೆ’ಗಳ ಮಾದರಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ‘ಮನ್ ಕೀ ಬಾತ್’ ಈ ಬಾರಿ ತಂತ್ರಜ್ಞಾನ ಮತ್ತು ಸಮಾಜಮುಖಿ ಸಂದೇಶಗಳ ಸಂಯೋಜನೆಯಿಂದಾಗಿ ವಿಶಿಷ್ಟ ಆವೃತ್ತಿಯಾಗಿದೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

