ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಹಿನ್ನೆಲೆ ವಂಚಕಿ ಮಹಿಳೆಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹಾಸನ ನಗರದ ಅರಳಿಪೇಟೆಯಲ್ಲಿ ಘಟನೆ ನಡೆದಿದೆ. ಹೇಮಾವತಿ ಎಂಬಾಕೆಯನ್ನು ಜಡೆ ಹಿಡಿದು ಎಳೆದಾಡಿ, ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.
ಟೈಲರ್ ಆಗಿ ಕೆಲಸ ಮಾಡ್ತಿದ್ದ ಹೇಮಾವತಿ, ಸುಮಾರು 10 ವರ್ಷಗಳಿಂದ ಜ್ಯೋತಿ ಡ್ರೆಸ್ ಮೇಕರ್ಸ್ ಅಂಗಡಿ ನಡೆಸುತ್ತಿದ್ರು. ತನ್ನ ಅಂಗಡಿಗೇ ಬರುವ ಕಸ್ಟಮರ್ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ರು. ಡ್ರೆಸ್ ಸ್ಟಿಚ್ಗೆ ಬರ್ತಿದ್ದ ಮಹಿಳಾ ಗ್ರಾಹಕರನ್ನೇ ಪುಸಲಾಯಿಸಿ ಹಣ ಪಡೆದಿದ್ರಂತೆ. ಇದಕ್ಕೆ ಪತಿ ವಿರೂಪಾಕ್ಷಪ್ಪ ಕೂಡ ಸಾಥ್ ಕೊಟ್ಟಿದ್ದ ಎನ್ನಲಾಗ್ತಿದೆ.
3 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವ ಆರೋಪ ಮಾಡಲಾಗಿದ್ದು, ಚಿನ್ನಾಭರಣಗಳನ್ನೂ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣವನ್ನು ಮಹಿಳೆಯರು ಕೊಟ್ಟಿದ್ರಂತೆ. 3 ಕೋಟಿ ರೂ.ಗಳನ್ನು ಖಾಸಗಿ ಚಿಟ್ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದೀನಿ. 1 ಕೋಟಿ ಚೀಟಿ ಹಾಕಿದ್ದೀನಿ ಅಂತಾ ನಂಬಿಸಿದ್ರಂತೆ. ಇದನ್ನ ನಂಬಿ ಹಲವಾರು ಮಹಿಳೆಯರು 50 ಸಾವಿರ, 5 ಲಕ್ಷ, 10 ಲಕ್ಷ ರೂ.ಗಳನ್ನು ಕೊಟ್ಟಿದ್ರಂತೆ. ಓರ್ವ ಮಹಿಳೆಯಿಂದಲೇ 45 ಲಕ್ಷ ರೂ.ಗಳನ್ನು ಹೇಮಾವತಿ ಪಡೆದಿದ್ದರು ಎನ್ನಲಾಗಿದೆ.
ಇನ್ನು, ಅಂಗಡಿ ಇಟ್ಟುಕೊಂಡಿದ್ದ ಕಟ್ಟಡದ ಮಾಲೀಕರಿಗೂ ಪಂಗನಾಮ ಹಾಕಿದ್ದಾರೆ. ಕೆಲ ತಿಂಗಳಿಂದ ಬಾಡಿಗೆಯನ್ನೂ ಕೊಟ್ಟಿಲ್ಲ. ನನ್ನ ಮಗಳು ಫಾರಿನ್ಗೆ ಹೋಗ್ತಿದ್ದಾಳೆ. ಅರ್ಜೆಂಟ್ ಆಗಿ ದುಡ್ಡು ಬೇಕು. ನಿಮ್ಮ ಒಡವೆಗಳನ್ನು ಅಡ ಇಟ್ಟಾದ್ರೂ ದುಡ್ಡು ಕೊಡಿ ಎಂದು ಹೇಮಾವತಿ ರಿಕ್ವೆಸ್ಟ್ ಮಾಡಿದ್ರಂತೆ. ಕೊಡಚಾದ್ರಿಯಲ್ಲಿ 1 ಕೋಟಿಯ ಚೀಟಿ ಹಾಕಿದ್ದೀನಿ. ಚೀಟಿ ದುಡ್ಡು ಬಂದ ಬಳಿಕ ಹಣ ವಾಪಸ್ ಕೊಡೋದಾಗಿ ಹೇಳಿದ್ರಂತೆ. ಹೇಮಾವತಿ ಮಾತು ನಂಬಿ ಕಟ್ಟಡದ ಮಾಲೀಕರೂ ದುಡ್ಡು ಕೊಟ್ಟಿದ್ದಾರೆ. ಆದರೆ ವಾಪಸ್ ಕೊಟ್ಟಿಲ್ಲ.
ಈ ಎಲ್ಲಾ ಹಣಕಾಸಿನ ವ್ಯವಹಾರಗಳಿಗೆ ಯಾವುದೇ ಸಾಕ್ಷಿ, ದಾಖಲೆಗಳಿಲ್ಲ. ಎಲ್ಲವೂ ನಗದಿನ ರೂಪದಲ್ಲಿ ವ್ಯವಹಾರ ನಡೆಸಿದ್ದಾರೆ. ಘಟನೆ ಸಂಬಂಧ ಪೆನ್ಶನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ, ದೂರು-ಪ್ರತಿದೂರು ದಾಖಲಾಗಿದೆ. ಥಳಿತಕ್ಕೊಳಗಾದ ಹೇಮಾವತಿ ಹಲ್ಲೆ ಕೇಸ್ ದಾಖಲಿಸಿದ್ರೆ, ವಂಚನೆಗೊಳಗಾದ ಮಹಿಳೆಯರು ವಂಚನೆ ಕೇಸ್ ದಾಖಲಿಸಿದ್ದಾರೆ.

