ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ವೈದ್ಯರನ್ನು ನೋಟಿಸ್ ನೀಡದೇ ಕೆಲಸದಿಂದ ವಜಾಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಈ ವೈದ್ಯರು ಕಳೆದ 7 ರಿಂದ 8 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರು. ಆದರೆ ಕಳೆದ 9 ತಿಂಗಳಿನಿಂದ ಇವರಿಗೆ ಸಂಬಳ ನೀಡಲಾಗಿಲ್ಲ. ಈಗ, ಯಾವುದೇ ಪೂರ್ವ ನೋಟಿಸ್ ನೀಡದೇ ಏಕಾಏಕಿ ವಜಾಗೊಳಿಸಿರುವುದರಿಂದ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಇದೇ ವೈದ್ಯರು ತಮ್ಮ ಪ್ರಾಣ ಪಣವಾಗಿಟ್ಟು ಸೇವೆ ಸಲ್ಲಿಸಿದ್ದರು. ಪ್ರತಿ ವರ್ಷ ಗುತ್ತಿಗೆ ಅವಧಿ ಮುಗಿದ ನಂತರ ನವೀಕರಣ ಮಾಡುತ್ತಿದ್ದರೂ, ಈ ಬಾರಿ ಯಾವುದೇ ಮಾಹಿತಿ ನೀಡದೇ ಸೇವೆಯಿಂದ ತೆಗೆದುಹಾಕಿದ್ದಾರೆ ಎಂದು ವೈದ್ಯರು ಆರೋಪಿಸಿದ್ದಾರೆ.
ಕೆಲವರು ಈಗಾಗಲೇ ಕರ್ತವ್ಯ ಬಿಡುಗಡೆ ಪತ್ರ ಸ್ವೀಕರಿಸಿದ್ದರೆ, ಇನ್ನೂ ಕೆಲವರು ಬಿಡುಗಡೆ ಪತ್ರ ಪಡೆಯದೆ ಬ್ರಿಮ್ಸ್ ಆಡಳಿತ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ವೈದ್ಯರು ಕಿಡಿಕಾರುತ್ತಾ, 9 ತಿಂಗಳ ಸಂಬಳವನ್ನೇ ಕೊಡದೆ, ನೋಟಿಸ್ ನೀಡದೇ ಕೆಲಸದಿಂದ ತೆಗೆದು ಹಾಕಿರುವುದು ಅನ್ಯಾಯ. ನಾವು ಕೋವಿಡ್ ಸಮಯದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದೇವೆ. ಈಗ ನಮ್ಮ ಸೇವೆಯನ್ನು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈದ್ಯರ ವಜಾ ಕುರಿತು ಬ್ರಿಮ್ಸ್ ಆಡಳಿತದಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಆದರೆ ಈ ಘಟನೆ ವೈದ್ಯ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ.
ವರದಿ : ಲಾವಣ್ಯ ಅನಿಗೋಳ

