ಬಿಹಾರ ಚುನಾವಣೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರಮಟ್ಟದ ಘಟಾನುಘಟಿ ನಾಯಕರೆಲ್ಲಾ, ಪ್ರಚಾರಕ್ಕೆ ಬಂದಿದ್ದಾರೆ. ಆದರೆ, ಕಾಂಗ್ರೆಸ್ಸಿನ ಪ್ರಧಾನ ನಾಯಕರಾಗಿರುವ ರಾಹುಲ್ ಗಾಂಧಿ ಮಾತ್ರ ಬಿಹಾರದತ್ತ ಇನ್ನೂ ಮುಖ ಮಾಡಿಲ್ಲ. ಇದು ಅಲ್ಲಿನ ಕಾಂಗ್ರೆಸ್ಸಿಗರಿಗೆ ನಿರಾಸೆ ತಂದಿದೆ.
ಹಾಗಂತ, ರಾಹುಲ್ ಗಾಂಧಿ ಸುಮ್ಮನೆ ಕುಳಿತಿಲ್ಲ. ಕೆಲವು ತಿಂಗಳಿಂದ ಬಿಜೆಪಿ ವಿರುದ್ಧದ ವೋಟ್ ಚೋರಿ ಹೋರಾಟದಲ್ಲಿ ಬ್ಯುಸಿಯಾಗಿದ್ರು. ಬಿಹಾರದಲ್ಲೂ ಮತಗಳ್ಳತನದ ಕಿಚ್ಚು ಹೊತ್ತಿಸಿದ್ರು. ಮತದಾರರ ಗುರುತಿನ ಚೀಟಿಗಳ ವಿಶೇಷ ಪರಿಶೀಲನೆ ಪ್ರಕ್ರಿಯೆಯಡಿ, ಲಕ್ಷಾಂತರ ಮತದಾರರ ಹೊರಗಿಟ್ಟಾಗಲೂ, ಪಾಟ್ನಾದಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ರು. ವೋಟರ್ಸ್ ಅಧಿಕಾರ್ ಯಾತ್ರಾ ಆಂದೋಲನದೊಂದಿಗೆ, ಬಿಹಾರ ಕಾಂಗ್ರೆಸ್ಸಿನಲ್ಲಿ ಹೊಸ ಸಂಚಲನ ತಂದಿದ್ದಾರೆ.
ಈಗ ಬಿಹಾರದಲ್ಲಿ ನವೆಂಬರ್ 6ರಿಂದ ಚುನಾವಣೆ ಆರಂಭವಾಗ್ತಿದೆ. ಮತದಾನಕ್ಕೂ ಮುನ್ನ 48 ಗಂಟೆಗಳಿಗೆ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತೆ. ಅಂದರೆ, ನವೆಂಬರ್ 5ರೊಳಗೆ ಎಲ್ಲಾ ಪಾರ್ಟಿಗಳು ತಮ್ಮ ಶಕ್ತಿ ಮೀರಿ ಪ್ರಚಾರ ನಡೆಸಲು ಅವಕಾಶವಿದೆ. ಇಂಥಾ ಹೊತ್ತಲ್ಲಿ ರಾಹುಲ್ ಗಾಂಧಿ ಬಿಹಾರದಲ್ಲಿ ಇರಬೇಕಿತ್ತು. ಪಾಟ್ನಾ ಸೇರಿ ಆ ರಾಜ್ಯದ ಹಲವಾರು ಕಡೆಗಳಲ್ಲಿ, ಬಹಿರಂಗ ಪ್ರಚಾರಗಳು, ರ್ಯಾಲಿಗಳಲ್ಲಿ ಭಾಗವಹಿಸಿ ಕಾಂಗ್ರೆಸ್ಸಿಗೆ ಶಕ್ತಿ ತುಂಬಬೇಕಿತ್ತು. ಆದರೆ, ಬಹಿರಂಗ ಪ್ರಚಾರ ಪಕ್ಕಕ್ಕಿರಲಿ. ಬಿಹಾರದ ಕಡೆ ಮುಖವನ್ನೇ ಮಾಡಿಲ್ಲ.
ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿ-ಆರ್‌ಜೆಡಿ ನೇತೃತ್ವದ ಎನ್‌ಡಿಎ ಬಣಕ್ಕೆ ಮತ್ತೆ ಅಧಿಕಾರ ಸಿಗುವುದಾಗಿ ಹೇಳಲಾಗಿತ್ತು. ಮಹಾಘಟಬಂಧನ್ ಮತ್ತೆ ವಿರೋಧ ಪಕ್ಷವಾಗಿಯೇ ಮುಂದುವರಿಯಲಿದೆ ಅಂತಾ ಹೇಳಲಾಗ್ತಿದೆ.
ಇದು ರಾಹುಲ್ ಗಾಂಧಿಯವರ ಆತ್ಮವಿಶ್ವಾಸವನ್ನು ಕುಗ್ಗಿಸಿರಬಹುದು ಎಂಬ ಊಹಾಪೋಹ ಶುರುವಾಗಿದೆ.
ಅಕ್ಟೋಬರ್ 28ರಂದು ಪಾಟ್ನಾದಲ್ಲಿ ನಡೆಯಲಿರುವ 1 ಬಹಿರಂಗ ಸಭೆಗೆ, ಪ್ರಿಯಾಂಕಾ ಗಾಂಧಿ ಬರುವುದಾಗಿ ಹೇಳಲಾಗಿದೆ. ರಾಹುಲ್ ಗಾಂಧಿ ಬಹಿರಂಗ ಪ್ರಚಾರ ಅಕ್ಟೋಬರ್ 29ರಂದು ಮುಜಫ್ಫರ್ ನಗರದಲ್ಲಿ ನಡೆಯುವುದಾಗಿ ಹೇಳಲಾಗ್ತಿದೆ. ಆದ್ರೆ, ರಾಹುಲ್ ಗಾಂಧಿ ಬರ್ತಾರಾ ಅನ್ನೋದಿನ್ನೂ ಖಾತ್ರಿಯಾಗಿಲ್ಲ.

