ಮೊಂಥಾ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೆ ಹೆಚ್ಚು ಇಲ್ಲದಿದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ. ಇಂದು ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜೊತೆಗೆ ಒಟ್ಟು ಏಳು ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಹ ಗುಡುಗು ಮಿಂಚು ಸಹಿತ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಳೆ ಅಕ್ಟೋಬರ್ 29ರಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ. ಜೊತೆಗೆ ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಅಕ್ಟೋಬರ್ 30ರಿಂದ ಮೊಂತಾ ಚಂಡಮಾರುತದ ಪ್ರಭಾವ ತಗ್ಗಲಿದ್ದು, ರಾಜ್ಯದಾದ್ಯಂತ ಮಳೆಯ ಪ್ರಮಾಣ ಕುಂಠಿತವಾಗುವ ನಿರೀಕ್ಷೆ ಇದೆ. ಸದ್ಯ ಹಿಂಗಾರು ಮಳೆ ರೈತರ ಬೆಳೆಗಳಿಗೆ ಹಾನಿ ಮಾಡುತ್ತಿದ್ದರೂ, 30ರ ನಂತರ ಬಿಸಿಲು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆಯ ಪ್ರಮಾಣದ ದೃಷ್ಟಿಯಿಂದ ದಾವಣಗೆರೆ ಜಿಲ್ಲೆಯ ಹೊದಿಗೆರೆಯಲ್ಲಿ 58.5 ಮಿಮೀ, ಕಲಬುರ್ಗಿ ಜಿಲ್ಲೆಯ ದಂಡೋತಿಯಲ್ಲಿ 49.5 ಮಿಮೀ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ 48.8 ಮಿಮೀ, ವಿಜಯಪುರದ ಇಟಗಿಯಲ್ಲಿ 44.5 ಮಿಮೀ, ಹಾಗೂ ಮುದ್ದೇಬಿಹಾಳದಲ್ಲಿ 40.0 ಮಿಮೀ ಮಳೆ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 25°C ಹಾಗೂ ಕನಿಷ್ಠ 20°C ಇರಲಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

