Wednesday, October 29, 2025

Latest Posts

ಖರ್ಗೆಯನ್ನು ಟೆಡ್ಡಿ ಬಾಯ್ ಎಂದು ಅಸ್ಸಾಂ ಬಿಜೆಪಿ ಟೀಕೆ !

- Advertisement -

ಕರ್ನಾಟಕ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಅಸ್ಸಾಂ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದೆ. ಪ್ರಿಯಾಂಕ್ ಖರ್ಗೆ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಸೆಮಿಕಂಡಕ್ಟರ್ ಕೈಗಾರಿಕೆ ಕುರಿತು ನೀಡಿದ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿ, ಅಸ್ಸಾಂ ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಕಿಡಿಕಾರಿದೆ.

ಹಲೋ ಟೆಡ್ಡಿ ಬಾಯ್! ಎಕ್ಸ್‌ನಲ್ಲಿ ಸುದೀರ್ಘ ಪ್ರಬಂಧ ಬರೆದರೆ ಯಾರೂ ಸೆಮಿಕಂಡಕ್ಟರ್ ತಜ್ಞರಾಗುವುದಿಲ್ಲ. ಅಸ್ಸಾಂ ಕುರಿತು ಉಪನ್ಯಾಸ ನೀಡುವ ಬದಲು ನಿಮ್ಮ ಕಲಬುರಗಿ ಜಿಲ್ಲೆಯ ಸ್ಥಿತಿಗೆ ಕಾಳಜಿ ವಹಿಸಿ. ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ನಿಮ್ಮ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ನಿಮ್ಮ ಟ್ಯಾಲೆಂಟ್ ಟ್ಯಾಂಕ್ ಬಗ್ಗೆ ತುಂಬಾ ಹೆಮ್ಮೆ ಪಡುವ ಅಗತ್ಯವಿಲ್ಲ ಎಂದು ಅಸ್ಸಾಂ ಬಿಜೆಪಿ ಎಕ್ಸ್‌ನಲ್ಲಿ ಟೀಕಿಸಿದೆ.

ಈ ಹಿಂದೆ ಪ್ರಿಯಾಂಕ್ ಖರ್ಗೆ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರಬೇಕಿದ್ದ ಸೆಮಿಕಂಡಕ್ಟರ್ ಹೂಡಿಕೆಗಳನ್ನು ಅಸ್ಸಾಂ ಮತ್ತು ಗುಜರಾತ್‌ಗೆ ತಿರುಗಿಸುತ್ತಿದೆ ಎಂದು ಆರೋಪಿಸಿದ್ದರು. ಕೈಗಾರಿಕೆಗಳು ಬಯಸಿದ್ದು ಬೆಂಗಳೂರನ್ನು, ಆದರೆ ಹೂಡಿಕೆಗಳು ಅಸ್ಸಾಂ ಮತ್ತು ಗುಜರಾತ್‌ಗೆ ಹೋಗುತ್ತಿವೆ. ಅಲ್ಲಿ ಪ್ರತಿಭೆಗಳು ಇವೆಯೇ? ಎಂದು ಅವರು ಪ್ರಶ್ನಿಸಿದ್ದರು. ಇದನ್ನು ಹಿಮಂತ ಬಿಸ್ವ ಶರ್ಮಾ, ಅಸ್ಸಾಂನ ಯುವಕರಿಗೆ ಮಾಡಿದ ಅವಮಾನ ಎಂದು ಹೇಳಿ, ಖರ್ಗೆ ಅವರನ್ನು‘ಫಸ್ಟ್ ಕ್ಲಾಸ್ ಇಡಿಯಟ್ ಎಂದು ಕರೆದಿದ್ದರು.

ಇದಕ್ಕೆ ಪ್ರತಿಯಾಗಿ ಪ್ರಿಯಾಂಕ್ ಖರ್ಗೆ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ ಪ್ರಕಟಿಸಿ, ಹಿಮಂತ ಶರ್ಮಾ ಅವರ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿದ್ದರು. ಅವರು ನೀತಿ ಆಯೋಗದ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ, ಒಂದು ದಶಕದ ಬಿಜೆಪಿ ಆಡಳಿತದ ನಂತರವೂ ಅಸ್ಸಾಂ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ದೇಶದ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ ಎಂದು ಬರೆದಿದ್ದರು.

ಇದಕ್ಕೂ ಅಸ್ಸಾಂ ಬಿಜೆಪಿ ಕಠಿಣ ಟೀಕೆ ನೀಡಿ, ಪ್ರಿಯಾಂಕ್ ಖರ್ಗೆ ತಮ್ಮ ರಾಜ್ಯದ ಸ್ಥಿತಿ ನೋಡಿಕೊಳ್ಳಲಿ, ಅಸ್ಸಾಂ ಬಗ್ಗೆ ಉಪನ್ಯಾಸ ನೀಡಬೇಡಿ ಎಂದು ಪ್ರತಿರೋಧಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss