Wednesday, October 29, 2025

Latest Posts

ಟನಲ್ ರೋಡ್ ಬಿಡಿ ಸ್ವಾಮಿ ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ – ಆರ್. ಅಶೋಕ್ ವ್ಯಂಗ್ಯ

- Advertisement -

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಶಾಲಾ ಮತ್ತು ಕಾಲೇಜುಗಳ ಶಿಕ್ಷಕರು ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೆ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಉಲ್ಲೇಖಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಆರ್. ಅಶೋಕ್ ವ್ಯಂಗ್ಯವಾಗಿ ಬರೆದುಕೊಂಡಿದ್ದು, ಟನಲ್ ರೋಡ್ ಬಿಡಿ ಸ್ವಾಮಿ, ಮೊದಲು ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ. ಸುರಂಗ ರಸ್ತೆ, ಸ್ಕೈಡೆಕ್, ಬ್ರ್ಯಾಂಡ್ ಬೆಂಗಳೂರು, ಜಿಬಿಎ… ಇವೆಲ್ಲ ಹೇಳಿ ಕನ್ನಡಿಗರಿಗೆ ಖಾಲಿ ಮಾತು ಕೊಟ್ಟಿದ್ದೀರಿ. ನಿಮ್ಮ ಜಿಬಿಎ ಅವ್ಯವಸ್ಥೆಯಿಂದ ಶಿಕ್ಷಕರು ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೆ ಸಂಸಾರ ನಡೆಸಲು ಹೋರಾಡುತ್ತಿದ್ದಾರೆ. ಮೊದಲು ಅವರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸಿ ಎಂದು ಡಿಕೆ ಶಿವಕುಮಾರ್‌ರನ್ನು ಟ್ಯಾಗ್ ಮಾಡಿದ್ದಾರೆ.

ಹಿಂದೆ ಬಿಎಂಪಿ ಅಸ್ತಿತ್ವದಲ್ಲಿದ್ದಾಗ ಗುತ್ತಿಗೆ ಶಿಕ್ಷಕರಿಗೆ ಪ್ರತಿ ತಿಂಗಳು ಗೌರವಧನ ನೀಡಲಾಗುತ್ತಿತ್ತು. ಆದರೆ ಜಿಬಿಎ ಅಸ್ತಿತ್ವಕ್ಕೆ ಬಂದ ನಂತರ, ಶಾಲೆ ಮತ್ತು ಕಾಲೇಜುಗಳನ್ನು ಸಂಬಂಧಿಸಿದ ಕಾರ್ಪೊರೇಷನ್‌ಗಳಿಗೆ ಹಸ್ತಾಂತರಿಸಲಾಗದ ಕಾರಣ, ತಾಂತ್ರಿಕ ಅಡಚಣೆಗಳಿಂದ ವೇತನ ಕಡತಗಳು ವಿಲೇವಾರಿ ಆಗದೇ ಉಳಿದಿವೆ ಎಂದು ಮೂಲಗಳು ತಿಳಿಸಿವೆ.

ಡಿ.ಕೆ. ಶಿವಕುಮಾರ್ ಅವರು ಹಿಂದೆ ಪಾಲಿಕೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಶಿಕ್ಷಕರ ನೇಮಕ ಮತ್ತು ಅತಿಥಿ ಶಿಕ್ಷಕರಿಗೆ ನಿಗದಿತ ವೇತನ ನೀಡುವ ಭರವಸೆ ನೀಡಿದ್ದರು. ಆದರೆ ಆ ಭರವಸೆಗಳು ಇನ್ನೂ ಜಾರಿಯಾಗಿಲ್ಲ. ಜೊತೆಗೆ ಶಿಕ್ಷಕರಿಗೆ ₹5 ಲಕ್ಷದ ಆರೋಗ್ಯ ವಿಮೆ ಸೌಲಭ್ಯ ನೀಡುವ ಘೋಷಣೆ ಕೂಡ ಪೂರ್ಣಗೊಂಡಿಲ್ಲ. ಇದರ ಮಧ್ಯೆ, ಮಹಿಳಾ ಶಿಕ್ಷಕರಿಗೆ ಹೆರಿಗೆ ರಜೆಯೂ ಸಿಗುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss