ಕಾಂಗ್ರೆಸ್ ಪಕ್ಷದಲ್ಲಿ ಬೇರೆ ಘಟಾನುಘಟಿಗಳಿಲ್ಲವಾ? ಜಾರಕಿಹೊಳಿನೇ ಉತ್ತರಾಧಿಕಾರಿ ಯಾಕೆ? ಅನ್ನೋ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಇದೀಗ ಗರಿಷ್ಠ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನವೆಂಬರ್‌ನಲ್ಲಿ ಎರಡುವರೆ ವರ್ಷ ಪೂರೈಸಲಿದೆ. ಇದೇ ವೇಳೆಗೆ ಸಿಎಂ ಸ್ಥಾನ ಬದಲಾವಣೆಯ ಸಾಧ್ಯತೆಗಳ ಕುರಿತ ಮಾತುಗಳು ವೇಗ ಪಡೆದಿವೆ.
ಇದಕ್ಕೆ ತೀವ್ರತೆ ನೀಡಿದಂತಾಗಿದೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ ಇತ್ತೀಚಿನ ಹೇಳಿಕೆ. ಸಿದ್ದರಾಮಯ್ಯ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ವೈಚಾರಿಕ ಚಿಂತನೆ ಹೊಂದಿರುವ ಸತೀಶ್ ಜಾರಕಿಹೊಳಿ ಅವರಲ್ಲಿ ಸಿದ್ದರಾಮಯ್ಯ ಸ್ಥಾನ ತುಂಬುವ ಶಕ್ತಿ ಇದೆ ಎಂದು ಅವರು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಇನ್ನು ಕಾಂಗ್ರೆಸ್‌ನಲ್ಲಿ ಸಾಕಷ್ಟು ಘಟಾನುಘಟಿ ನಾಯಕರು ಇದ್ದಾರೆ. ಹಾಗಿರುವಾಗ ಸಿದ್ದರಾಮಯ್ಯ ಅವರ ಆಯ್ಕೆ ಕೇವಲ ಸತೀಶ್ ಜಾರಕಿಹೊಳಿ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಕೈ ಪಾಳಯದಲ್ಲಿ ಸತೀಶ್ ಜಾರಕಿಹೊಳಿ ಅವರನ್ನ ಬಿಟ್ಟರೆ ಬೇರೆ ದಿಗ್ಗಜರು ಇರಲಿಲ್ಲವೇ? ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿಯೇ ಯಾಕಾಗಬೇಕು? ಅನ್ನೋದನ್ನ ನೋಡೋದಾದ್ರೆ ಸತೀಶ್ ಜಾರಕಿಹೊಳಿ ಪ್ರಭಾವಿ ರಾಜಕೀಯ ಕುಟುಂಬದವರು.
ವಾಲ್ಮೀಕಿ ಸಮುದಾಯದ ಈ ನಾಯಕರು ವಿದ್ಯಾರ್ಥಿ ಒಕ್ಕೂಟದಿಂದಲೇ ತಮ್ಮ ರಾಜಕೀಯ ಪಯಣ ಆರಂಭಿಸಿದ್ದರು. ಜನಸಂಪರ್ಕ, ಸಂಘಟನಾ ಸಾಮರ್ಥ್ಯ ಮತ್ತು ವೈಚಾರಿಕ ನಿಲುವಿನಿಂದ ಅವರು ರಾಜ್ಯ ರಾಜಕೀಯದಲ್ಲಿ ತಮ್ಮದೇ ಗುರುತು ಮೂಡಿಸಿದ್ದಾರೆ. ಹೀಗಾಗಿ ಯತೀಂದ್ರ ಅವರ ಹೇಳಿಕೆ ಕಾಂಗ್ರೆಸ್ ಒಳಗಿನ ಬಣಗಳ ನಡುವೆ ಹೊಸ ಚರ್ಚೆಗಳಿಗೆ ವೇದಿಕೆ ಕಲ್ಪಿಸಿದೆ. ಕಾಂಗ್ರೆಸ್‌ನೊಳಗೆ ಹೊಸ ಚರ್ಚೆ ಹುಟ್ಟುಹಾಕಿದೆ.
ಸಿದ್ದರಾಮಯ್ಯ ಬಣವು ಈ ಹೇಳಿಕೆಯ ಮೂಲಕ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ಕಳುಹಿಸಿರುವುದೇ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಕೆಲವರು ಇದನ್ನು ಅಹಿಂದ ಬಣದ ನಾಯಕತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವೆಂದು, ಮತ್ತಿತರರು ಸಿದ್ದರಾಮಯ್ಯ ಅವರ ರಾಜಕೀಯ ತಂತ್ರವೆಂದು ವಿಶ್ಲೇಷಿಸುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ

