ಚಿತ್ತಾಪುರಲ್ಲಿ RSS ಪಥಸಂಚಲನಕ್ಕೆ ಅನುಮತಿ ನೀಡುವ ವಿಚಾರ, ಇಡೀ ಕಲಬುರಗಿ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟು ಮಾಡಿದೆ. ಈ ಕುರಿತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಆ ವೇಳೆ ಸಂಘಟನೆಗಳಿಂದ ವಾಗ್ವಾದ ನಡೆದಿದೆ.
ಸಭೆಯಲ್ಲಿ RSS, ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ ಹಾಗೂ ಛಲವಾದಿ ಮಹಾಸಭಾ ಸಂಘಟನೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಸಭೆಯಲ್ಲಿ ಒಮ್ಮತ ಬರದೆ, ವಾಗ್ವಾದ ಉಂಟಾಗಿ ಅರ್ಧದಲ್ಲೇ ಮುಕ್ತಾಯಗೊಂಡಿದೆ.
ಜೈಭೀಮ್ ಸೇನೆ ಸಂಘಟನೆಯ ಮುಖಂಡ ಗುಂಡಪ್ಪ ಲಂಡನ್ಕರ್ ಅವರನ್ನು ಒಳಗಡೆ ಬಿಡದ ಹಿನ್ನೆಲೆ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡದಿದೆ. ಇದರ ಬೆನ್ನಲ್ಲೇ ಮತ್ತೊಂದೆಡೆ ಶಾಂತಿ ಸಭೆಯಲ್ಲಿ RSS ಹಾಗೂ ಇತರೆ ಸಂಘಟನೆಗಳಿಂದ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಶಾಂತಿ-ಸಭೆ ಅರ್ಧಕ್ಕೆ ಮೊಟಕುಗೊಂಡಿದೆ.
ದಲಿತ ಪ್ಯಾಂಥರ್ಸ್ ಮತ್ತು ಜೈಭೀಮ್ ಸೇನೆ ಸಂಘಟನೆಯ ಕಾರ್ಯಕರ್ತರು, ಲಾಠಿ ಬಿಟ್ಟು ಪಥಸಂಚಲನ ನಡೆಸಲಿ ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಆರ್ಎಸ್ಎಸ್ಒಪ್ಪದ ಹಿನ್ನೆಲೆ ವಾಗ್ವಾದ ತೀವ್ರಗೊಂಡಿದೆ. ಸಭೆಯಿಂದ ಹೊರಬಂದ ನಂತರ ಸಂಘಟನೆ ಕಾರ್ಯಕರ್ತರು ಆರ್ಎಸ್ಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಯಾವುದೇ ಒಮ್ಮತದ ನಿರ್ಧಾರ ಕೈಗೊಳ್ಳದ ಕಾರಣ, ಜಿಲ್ಲಾಡಳಿತ ಎಲ್ಲಾ ಸಂಘಟನೆಗಳ ಲಿಖಿತ ಅಭಿಪ್ರಾಯವನ್ನು ಸಂಗ್ರಹಿಸಿ, ಹೈಕೋರ್ಟ್ಗೆ ವರದಿ ಸಲ್ಲಿಸಲು ತೀರ್ಮಾನಿಸಿದೆ. ಹೀಗಾಗಿ ಆರ್ಎಸ್ಎಸ್ ಪಥಸಂಚಲನ ಕುರಿತ ಅಂತಿಮ ತೀರ್ಪು, ಈಗ ಹೈಕೋರ್ಟ್ ಕೈಯಲ್ಲೇ ಇದೆ. ಅಕ್ಟೋಬರ್ 30ರಂದು ಕಲಬುರಗಿ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.

