ಆಂಧ್ರಪ್ರದೇಶಕ್ಕೆ ಪ್ರಳಯಾಂತಕ ಮೊಂಥಾ ಚಂಡಮಾರುತದ ಆಗಮನವಾಗಿದೆ. ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಮೊಂಥಾ ಚಂಡಮಾರುತ ಮೊದಲ ಬಲಿ ಪಡೆದಿದೆ. ಜೊತೆಗೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾರೀ ಗಾಳಿ ಮಳೆಗೆ ಮನೆಗಳ ಮೇಲೆ ಮರಗಳು ಬಿದ್ದಿವೆ. ಪ್ರತ್ಯೇಕ ಘಟನೆಗಳಲ್ಲಿ, ಓರ್ವ ಬಾಲಕ ಮತ್ತು ಆಟೋ ಚಾಲಕ ಗಾಯಗೊಂಡಿದ್ದಾರೆ. ವಿದ್ಯುತ್ ಕಡಿತ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದು, ಮೀನುಗಾರರು ತೀರದಲ್ಲೇ ಇರಲು ಸೂಚಿಸಲಾಗಿದೆ. ಕಾಕಿನಾಡ ಮತ್ತು ಕೃಷ್ಣಪಟ್ಟಣಂ ಬಂದರುಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಜನರನ್ನು ರಕ್ಷಿಸಲು ಮತ್ತು ಹಾನಿಯನ್ನು ಕಡಿಮೆ ಮಾಡಲು ಆಂಧ್ರ ಸರ್ಕಾರವು ರಾತ್ರಿ ವೇಳೆ ಕರ್ಫ್ಯೂ ವಿಧಿಸಿದೆ. 7 ಕರಾವಳಿ ಜಿಲ್ಲೆಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ. 7 ಕರಾವಳಿ ಜಿಲ್ಲೆಗಳಾದ ಕೃಷ್ಣ, ಎಲೂರು, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕಾಕಿನಾಡ, ಡಾ.ಬಿ.ಆರ್ ಅಂಬೇಡ್ಕರ್ ಕೊನಸೀಮಾ ಮತ್ತು ಅಲ್ಲೂರಿ ಸೀತಾರಾಮ ರಾಜುಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ, ಎಲ್ಲಾ ವಾಹನ ಸಂಚಾರವನ್ನು ನಿಷೇಧಿಸಿದೆ.
ಕಾಕಿನಾಡ ಬಳಿ ಸಮುದ್ರದ ತೀರದಲ್ಲಿ ದೈತ್ಯಾಕಾರದ ಅಲೆಗಳು ಎದ್ದಿದ್ದು, ಭಾರೀ ಬಿರುಗಾಳಿ ಶುರುವಾಗಿದೆ. ಮೊಂಥಾ ಚಂಡಮಾರುತ ಕಾಕಿನಾಡದ ಸುತ್ತಮುತ್ತಲಿನ ಪ್ರದೇಶ ದಾಟುತ್ತಿದ್ದಂತೆ ಭೂಕುಸಿತ ಉಂಟಾಗಿದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತೆಲಂಗಾಣ, ದಕ್ಷಿಣ ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಅತಿ ಹೆಚ್ಚು ಮಳೆ, ಬಿರುಗಾಳಿ ಮತ್ತು ಚಂಡಮಾರುತದ ಅಲೆಗಳು ಮುಂದುವರಿಯುವ ನಿರೀಕ್ಷೆಯಿದೆ. ನಿವಾಸಿಗಳು ಮನೆಯೊಳಗೆ ಇರಬೇಕೆಂದು ಮತ್ತು ಅಧಿಕೃತ ಸುರಕ್ಷತಾ ಸಲಹೆಗಳನ್ನು ಪಾಲಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಛತ್ತೀಸ್‌ಗಢ ಮತ್ತು ಪುದುಚೇರಿಯಾದ್ಯಂತ 25 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ತಾತ್ಕಾಲಿಕ ಆಶ್ರಯಗಳು, ಆಹಾರ ಮತ್ತು ವೈದ್ಯಕೀಯ ನೆರವು ವ್ಯವಸ್ಥೆ ಮಾಡಲಾಗಿದೆ. ಮಳೆಪೀಡಿತ ಪ್ರದೇಶಗಳಲ್ಲಿನ ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳು ಮುಚ್ಚಲ್ಪಟ್ಟಿವೆ.

