ಬೆಂಗಳೂರು ನಗರದ ಮೂಲಸೌಕರ್ಯ ಕೊರತೆ, ರಸ್ತೆ ಗುಂಡಿ ಇತ್ಯಾದಿ ವಿಚಾರಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಇದೇ ಸಮಯಕ್ಕೆ ಸರಿಯಾಗಿ ಬೆಂಜ್ ಸಿಇಒ ಮಾತಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಟೀಕಾಕಾರರಿಗೆ ಟ್ವೀಟ್ ಮೂಲಕವೇ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನ ಅಸಾಧಾರಣ ಪ್ರತಿಭೆಯ ಕುರಿತಾದ ಈ ಮಾತುಗಳು, ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಬೆಂಗಳೂರು ಬೆಳೆಯುತ್ತಿರುವುದನ್ನು ಪ್ರತಿಬಿಂಬಿಸುತ್ತವೆ. ಮರ್ಸಿಡಿಸ್ ಬೆಂಜ್ ಸಿಇಒ ಮಾತುಗಳು ನಮ್ಮ ಜನರ ಪ್ರತಿಭೆಗೆ, ಹೆಮ್ಮೆಯ ಮನ್ನಣೆಯಾಗಿದೆ ಎಂದು ಎಕ್ಸ್ ಸಂದೇಶದಲ್ಲಿ ಡಿಕೆಶಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ಸೃಜನಶೀಲತೆ, ಪ್ರತಿಭೆ ಮತ್ತು ನಾವೀನ್ಯತೆಯ ಮನೋಭಾವವು, ವಿಶ್ವದ ಗಣ್ಯರಿಗೆ ಸ್ಫೂರ್ತಿ ನೀಡುತ್ತಲೇ ಇದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಲು ನಾವು ಶ್ರಮಿಸುತ್ತಲೇ ಇರುತ್ತೇವೆ ಎಂದು ಡಿಕೆಶಿ ಪೋಸ್ಟ್ ಮಾಡಿದ್ದಾರೆ.
ಜಗತ್ತಿನ ಎಲ್ಲೆಡೆಯಿಂದ ಹೊಸ ಹೊಸ ಪ್ರತಿಭೆಗಳನ್ನು ನಾವು ಸ್ವಾಗತಿಸಬೇಕು. ಬೆಂಗಳೂರಿಗೆ ಹೋಗಿ ಬಂದಾಗಲೆಲ್ಲ ನಾನು ದುಪ್ಪಟ್ಟು ಉತ್ಸಾಹದಲ್ಲಿರುತ್ತೇನೆ. ಬೆಂಗಳೂರಿನಲ್ಲಿರುವ ಸಾಫ್ಟ್‌ವೇರ್ ಪ್ರತಿಭಾ ಸಮೂಹವು ಬಹಳ ಅದ್ಭುತವಾಗಿದೆ.
ಅತ್ಯುತ್ತಮವಾಗಿ ಜರ್ಮನ್ ಭಾಷೆ ಮಾತನಾಡುವವರನ್ನು ಬೆಂಗಳೂರಿನಲ್ಲಿ ನೋಡಿದ್ದೇನೆ. ಅಂಥವರ ಬಳಿ ನೀವು ಜರ್ಮನಿಯಲ್ಲಿ ಎಲ್ಲಿ ಓದಿದ್ದೀರಿ ಎಂದು ಕೇಳಿದರೆ, ಜರ್ಮನಿಗೆ ಎಂದೂ ಹೋಗಿಯೇ ಇಲ್ಲ ಎನ್ನುತ್ತಾರೆ. ಇಂಥಾ ಸ್ಫೂರ್ತಿ, ಪ್ರತಿಭೆಗಳೇ ನಮಗೆ ಬೇಕು. ಇಂಥವರು ಇರುವ ಕಡೆಗೆ ನಾವು ಹೋಗುತ್ತೇವೆ ಎಂದು ಮರ್ಸಿಡಿಸ್ ಬೆಂಜ್ ಸಿಇಒ ಓಲಾ ಕ್ಯಾಲೆನಿಯಸ್ ಹೇಳಿದ್ದಾರೆ.

