ಆರ್.ವಿ. ರಸ್ತೆ – ಬೊಮ್ಮಸಂದ್ರ ಯೆಲ್ಲೋ ಲೈನ್ ಮಾರ್ಗದಲ್ಲಿ ಐದನೇ ರೈಲು ನವೆಂಬರ್ 1ರಿಂದ ಸಂಚಾರ ಆರಂಭಿಸಲಿದೆ. ಪ್ರಸ್ತುತ ನಾಲ್ಕು ರೈಲುಗಳೊಂದಿಗೆ ಕಾರ್ಯಾಚರಣೆ ನಡೆಯುತ್ತಿದ್ದು, ಪ್ರತಿ ರೈಲು ಸಂಚಾರದ ನಡುವೆ ಸುಮಾರು 19 ನಿಮಿಷಗಳ ಅಂತರವಿದೆ. ಐದನೇ ರೈಲು ಸೇರ್ಪಡೆಯಾದ ಬಳಿಕ ಈ ಅಂತರ 15 ನಿಮಿಷಕ್ಕಿಂತ ಕಡಿಮೆಯಾಗಲಿದ್ದು, ಪ್ರಯಾಣಿಕರ ನಿರೀಕ್ಷೆಯ ಸಮಯ ಇನ್ನಷ್ಟು ಕಡಿಮೆಯಾಗಲಿದೆ. ಸದ್ಯ ಐದನೇ ರೈಲಿನ ಸುರಕ್ಷತಾ ಮತ್ತು ತಾಂತ್ರಿಕ ಪರೀಕ್ಷೆಗಳು ಅಂತಿಮ ಹಂತದಲ್ಲಿವೆ.
ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಯೆಲ್ಲೋ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದರು. ಆರಂಭದಲ್ಲಿ ಕೇವಲ ಮೂರು ರೈಲುಗಳೊಂದಿಗೆ ಸಂಚಾರ ಆರಂಭವಾಗಿ, ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಓಡಾಡುತ್ತಿದ್ದವು. ಬಳಿಕ ಸೆಪ್ಟೆಂಬರ್ 10ರಂದು ನಾಲ್ಕನೇ ರೈಲು ಸೇರಿ ಅಂತರ 19 ನಿಮಿಷಕ್ಕೆ ಇಳಿಸಿತು. ಈಗ ಐದನೇ ರೈಲು ಸೇರ್ಪಡೆಯಾದರೆ ಪ್ರಯಾಣಿಕರಿಗೆ 15 ನಿಮಿಷಕ್ಕೊಮ್ಮೆ ರೈಲು ಸೌಲಭ್ಯ ದೊರೆಯಲಿದೆ.
ಇದರ ಮಧ್ಯೆ, ಹೊಸೂರು ಮೆಟ್ರೋ ವಿಸ್ತರಣೆ ಯೋಜನೆಗೆ ದೊಡ್ಡ ತಿರುವು ಲಭಿಸಿದೆ. ಕನ್ನಡಿಗರ ವಿರೋಧಕ್ಕೆ ಕಾರಣವಾಗಿದ್ದ ಈ ಯೋಜನೆ ಇದೀಗ ತಾಂತ್ರಿಕವಾಗಿ ಕಾರ್ಯಸಾಧ್ಯವಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.
ಮೂಲಗಳ ಪ್ರಕಾರ, ಕರ್ನಾಟಕದ BMRCL ಮತ್ತು ತಮಿಳುನಾಡಿನ ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ ತಂತ್ರಜ್ಞಾನಗಳು ವಿಭಿನ್ನ ವಿದ್ಯುತ್ ಚಾಲನಾ ವ್ಯವಸ್ಥೆಗಳನ್ನು ಬಳಸುತ್ತಿರುವುದರಿಂದ ಇವುಗಳನ್ನು ಸಂಯೋಜಿಸುವುದು ಅಸಾಧ್ಯ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ತಮಿಳುನಾಡು ಬೊಮ್ಮಸಂದ್ರದಿಂದ 23 ಕಿ.ಮೀ. ವಿಸ್ತರಿಸಿ ಹೊಸೂರಿನವರೆಗೆ ಸಂಪರ್ಕಿಸಲು ವಿನಂತಿ ಮಾಡಿದ್ದರೂ, ತಾಂತ್ರಿಕ ಅಸಮರ್ಪಕತೆಯಿಂದ ಯೋಜನೆಗೆ ಈಗ ಬ್ರೇಕ್ ಬಿದ್ದಂತಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

