RSS ಸಂಘಟನೆಯ ಪಥಸಂಚಲನದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರಿಗೆ ನೋಟಿಸ್ ಜಾರಿಯಾಗಿದೆ. ರಾಜ್ಯ ಸರ್ಕಾರವು ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ಪರೋಕ್ಷವಾಗಿ ಅಂಕುಶ ಹಾಕಲು ಯತ್ನಿಸುತ್ತಿದ್ದ ವೇಳೆಯಲ್ಲೇ, ಈ ಬೆಳವಣಿಗೆ ನಡೆದಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಅಕ್ಟೋಬರ್ 7 ಮತ್ತು 13ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆದಿತ್ತು. ಈ ಪಥಸಂಚಲನದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾದ ಮಹದೇವ, ಶಾಲಿವಾನ್, ಪ್ರಕಾಶ್ ಮತ್ತು ಸತೀಶ್ ಭಾಗವಹಿಸಿದ್ದರೆಂಬ ಆರೋಪ ಇದೆ.
ದಲಿತ ಸೇನೆಯ ಮುಖಂಡರು ಅಕ್ಟೋಬರ್ 27ರಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಈ ಕುರಿತು ದೂರು ಸಲ್ಲಿಸಿ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ದೂರು ಸ್ವೀಕರಿಸಿದ ಮರುದಿನವೇ ಅಂದರೆ ಮಂಗಳವಾರ ಬಿಇಒ ನಾಲ್ವರು ಶಿಕ್ಷಕರಿಗೂ ಕಾರಣ ಕೇಳುವ ನೋಟಿಸ್ ಜಾರಿಮಾಡಿದ್ದಾರೆ.
ಬಿಇಒ ಕಚೇರಿಯಿಂದ ನೀಡಿರುವ ನೋಟಿಸ್‌ನಲ್ಲಿ, ಶಿಕ್ಷಕರು ಸರ್ಕಾರಿ ನೌಕರರಾಗಿರುವುದರಿಂದ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಘಟನೆಯ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಆದರೆ ತಾವು ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿ ಸರ್ಕಾರಿ ಸೇವಾ ನಿಬಂಧನೆಗಳನ್ನು ಉಲ್ಲಂಘಿಸಿದ್ದೀರಿ ಎಂದು ಹೇಳಲಾಗಿದೆ.
ಇದೇ ವೇಳೆ, ನೋಟಿಸ್ ತಲುಪಿದ ಬಳಿಕ ಲಿಖಿತ ಉತ್ತರ ನೀಡಿ ಖುದ್ದಾಗಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಪ್ರತಿಕ್ರಿಯೆ ನೀಡದಿದ್ದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು –1957ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ

