ಕೊಲ್ಲಾಪುರದ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾ ಆಡಳಿತ ಆದೇಶಕ್ಕೆ ಹೊರಡಿಸಿದೆ. ಈ ಸಂಬಂಧ ಕನ್ನೇರಿ ಶ್ರೀಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಅವರನ್ನೊಳಗೊಂಡ ಪೀಠವು ಈ ವಿಚಾರಣೆ ವೇಳೆ ಕನ್ನೇರಿ ಸ್ವಾಮೀಜಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆ ವೇಳೆ, ಸ್ವಾಮೀಜಿಯು ನೀಡಿದ್ದ ಕೀಳುಮಟ್ಟದ ಹಾಗೂ ಪ್ರಚೋದನಕಾರಿ ಹೇಳಿಕೆಗಳ ಕುರಿತು ಕೋರ್ಟ್ ತೀವ್ರ ಎಚ್ಚರಿಕೆ ನೀಡಿದೆ.
ಸ್ವಾಮೀಜಿಯಾಗಿ ನೀವು ಗಂಭೀರವಾಗಿರಬೇಕು. ಈ ರೀತಿಯ ಹೇಳಿಕೆಗಳು ನಿಮ್ಮ ಘನತೆಗೆ ತಕ್ಕದ್ದಲ್ಲ. ನೀವು ಒಳ್ಳೆಯ ಪ್ರಜೆಯಲ್ಲ. ಇಂತಹ ಅವಹೇಳನಕಾರಿ ಭಾಷೆ ವಾಕ್ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲಎಂದು ಪೀಠವು ಸ್ಪಷ್ಟಪಡಿಸಿದೆ. ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ಕನ್ನೇರಿ ಶ್ರೀಗಳ ಮೇಲ್ಮನವಿಯನ್ನು ತಿರಸ್ಕರಿಸಿದೆ.
ತೀರ್ಪಿನ ವೇಳೆ ಪೀಠವು ತೀಕ್ಷ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ನೀವು ಮಾತನಾಡುವುದು ನಿಲ್ಲಿಸಿ, ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ ಎಂದು ಕಾಡಸಿದ್ದೇಶ್ವರ ಸ್ವಾಮೀಜಿಗೆ ಸಲಹೆ ನೀಡಿದೆ. ಈ ಮೂಲಕ ವಿಜಯಪುರ ಪ್ರವೇಶ ನಿಷೇಧದ ವಿರುದ್ಧದ ಕನ್ನೇರಿ ಶ್ರೀಗಳ ಕಾನೂನು ಹೋರಾಟಕ್ಕೆ ಅಂತ್ಯ ಹಾಡಿದೆ.
ವರದಿ : ಲಾವಣ್ಯ ಅನಿಗೋಳ

