ಬದ್ಧವೈರಿ ದೇಶ ಪಾಕಿಸ್ತಾನದಲ್ಲಿರುವ ಬೆಲೆ ಏರಿಕೆಯ ಪಟ್ಟಿ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಅಲ್ಲಿ ಟೊಮೆಟೊ ಬೆಲೆ ಒಂದೇ ತಿಂಗಳಲ್ಲಿ ಶೇ.400 ಏರಿಕೆ ಕಂಡು, ಒಂದು ಕಿಲೋಗೆ 600 ರೂಪಾಯಿ ಗಡಿಯನ್ನು ದಾಟಿದೆ. ಈ ಬೃಹತ್ ಬೆಲೆ ಏರಿಕೆಯಿಂದ ಜನರ ಅಸಮಾಧಾನ ಹೆಚ್ಚಾಗಿದೆ. ಪಾಕಿಸ್ತಾನ ಸಂಸತ್ತಿನಲ್ಲಿಯೂ ಈ ವಿಷಯ ಚರ್ಚೆಯಾಗಿದೆ. ಕೆಲವರು ವ್ಯಂಗ್ಯವಾಗಿ ಇನ್ನೂ ಸ್ವಲ್ಪ ದಿನಗಳಲ್ಲಿ ಟೊಮೆಟೊ ಖರೀದಿಸಲು ಬ್ಯಾಂಕ್ ಲೋನ್ ಬೇಕಾಗುತ್ತೆ ಅಂತ ಟೀಕೆ ಮಾಡಿದ್ದಾರೆ. ಸಂಸದರಲ್ಲಿ ಒಬ್ಬರು ಕೈಯಲ್ಲಿ ಒಂದು ಟೊಮೆಟೊ ಹಿಡಿದು ಭಾಷಣ ಮಾಡಿದ್ದು, ಅದರ ಬೆಲೆ ₹75 ಅಂತ ಹೇಳಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಪರಿಸ್ಥಿತಿಗೆ ಪ್ರಮುಖ ಕಾರಣ ಪಾಕಿಸ್ತಾನ–ಅಫ್ಘಾನಿಸ್ತಾನ ಗಡಿ ಬಂದ್ ಆಗಿರುವುದು. ಅಕ್ಟೋಬರ್ 11ರಿಂದ ಎರಡು ದೇಶಗಳ ನಡುವೆ ಉದ್ಭವಿಸಿದ ವಿವಾದದಿಂದ ವ್ಯಾಪಾರ ಸಂಪೂರ್ಣವಾಗಿ ನಿಂತು ಹೋಯ್ತು. ಪಾಕಿಸ್ತಾನ ವಾಯುದಾಳಿ ನಡೆಸಿದ ನಂತರ ಲಾರಿಗಳು ಗಡಿಯಲ್ಲೇ ನಿಂತು ಹೋಗಿವೆ. ಸುಮಾರು 2,600 ಕಿಮೀ ಉದ್ದದ ಈ ಗಡಿ ಎರಡೂ ದೇಶಗಳ ವ್ಯಾಪಾರದ ಜೀವನಾಡಿಯಾಗಿತ್ತು. ಆದರೆ ಈಗ ಅದು ಸಂಪೂರ್ಣ ಮುಚ್ಚಿದೆ.
ತಜ್ಞರ ಪ್ರಕಾರ, ಈ ಗಡಿ ಬಂದ್‌ನಿಂದ ಎರಡು ದೇಶಗಳಿಗೂ ದಿನಕ್ಕೆ 1 ಮಿಲಿಯನ್ ಡಾಲರ್ ನಷ್ಟ ಆಗುತ್ತಿದೆ. ವರ್ಷಕ್ಕೆ 23 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳು ಈ ಮಾರ್ಗದಿಂದ ಸಾಗುತ್ತಿದ್ದವು. ಶಾಂತಿ ಮಾತುಕತೆ ನಡೆಸಲು ಇಸ್ತಾನ್‌ಬುಲ್‌ನಲ್ಲಿ ಸಭೆ ನಡೆದರೂ ಫಲ ಸಿಗಲಿಲ್ಲ. ಇದರಿಂದಾಗಿ ವ್ಯಾಪಾರ ಸಂಪೂರ್ಣವಾಗಿ ಕುಸಿತಕ್ಕೊಳಗಾಗಿದೆ.
ಪಾಕಿಸ್ತಾನಕ್ಕೆ ಇದು ಡಬಲ್ ಹೊಡೆತ. ಮೊದಲು ಅವರು ಭಾರತದಿಂದ ತರಕಾರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಆದರೆ ಭಾರತ ವ್ಯಾಪಾರ ನಿಲ್ಲಿಸಿದ ನಂತರ ಅಫ್ಘಾನಿಸ್ತಾನವೇ ಅವರ ಪ್ರಮುಖ ಪೂರೈಕೆದಾರನಾಯಿತು. ಈಗ ಆ ದಾರಿಯೂ ಮುಚ್ಚಿಹೋಗಿರುವುದರಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಆಕಾಶ ಮುಟ್ಟಿವೆ. ಟೊಮೆಟೊ ₹600, ಶುಂಠಿ ₹750, ಬೆಳ್ಳುಳ್ಳಿ ₹400, ಬಟಾಣಿ ₹500, ಈರುಳ್ಳಿ ₹120, ಕೊತ್ತಂಬರಿ ಕಟ್ಟಿಗೆ ₹50 – ಸಾಮಾನ್ಯ ಜನರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

