ನಾಯಕತ್ವ ಬದಲಾವಣೆ ಗದ್ದಲ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯರನ್ನ ಸಿಎಂ ಆಗಿ ಉಳಿಸಿಕೊಳ್ಳಲು ಶತಾಯಗತಾಯ ಸಿದ್ದು ಬಣ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ಆಪ್ತರು ಗೌಪ್ಯ ಸಭೆ, ಮಾತುಕತೆ , ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಈ ಬಾರಿ ಸೈಲೆಂಟಾಗಿ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಡಿಕೆ ಶಿವಕುಮಾರ್ ಅವರದ್ದು ಸಹಜವಾಗಿ ಆಕ್ರಮಣಕಾರಿ ವ್ಯಕ್ತಿತ್ವ. ಸಿಎಂ ಬದಲಾವಣೆ, 50-50 ಒಪ್ಪಂದದ ಬಗ್ಗೆ ಈ ಹಿಂದೆ ಹಲವು ಬಾರಿ ಹೇಳಿದ್ದಾರೆ. ಕೆಲವೊಮ್ಮೆ ಪ್ರತ್ಯಕ್ಷ ಹಾಗೂ ಕೆಲವೊಮ್ಮೆ ಪರೋಕ್ಷವಾಗಿ ತಮ್ಮ ಮನದಾಳದಲ್ಲಿರುವ ಸಿಎಂ ಸ್ಥಾನದ ಬಯಕೆಯನ್ನು ಹೇಳಿಕೊಂಡಿದ್ದಾರೆ.
ಆದರೆ ಈ ಬಾರಿ ಡಿಕೆಶಿ ಯಾವುದೇ ಡ್ಯಾಮೇಜಿಂಗ್ ಹೇಳಿಕೆ ನೀಡುತ್ತಿಲ್ಲ. ಸಿಎಂ ಉತ್ತರಾಧಿಕಾರಿ ಕುರಿತಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ ಸಂದರ್ಭದಲ್ಲಿ, ಡಿಕೆಶಿ ನಡೆ ಕುತೂಹಲಕ್ಕೆ ಕಾರಣವಾಗಿತ್ತು. ಇತರ ಶಾಸಕರಿಗೆ ನೋಟಿಸ್ ನೀಡಿದ ಮಾದರಿಯಲ್ಲಿ ಯತೀಂದ್ರ ಅವರಿಗೂ ನೀಡುತ್ತಾರಾ? ಎಂಬ ಕುತೂಹಲ ಇತ್ತು. ಆದರೆ ಇಲ್ಲೂ ಡಿಕೆಶಿ ಎಚ್ಚರಿಕೆಯಿಂದ ನಡೆದುಕೊಂಡಿದ್ದಾರೆ.
ಜೊತೆಗೆ ಸಿಎಂ ಸ್ಥಾನದ ಬಗ್ಗೆ ಮಾತನಾಡದಂತೆ ಆಪ್ತರಿಗೂ ಸೂಚನೆ ನೀಡಿದ್ದಾರೆ. ಹಾಗಾಗಿ ಬಹಿರಂಗವಾಗಿ ಡಿಕೆಶಿ ಪರವಾಗಿ ಬ್ಯಾಟ್ ಬೀಸುತ್ತಿದ್ದ ಶಾಸಕರು ಸೈಲೆಂಟಾಗಿದ್ದಾರೆ. ತಮ್ಮ ಕಡೆಯಿಂದ ಹೈಕಮಾಂಡ್‌ಗೆ ಯಾವುದೇ ದೂರು ಹೋಗದ ರೀತಿಯಲ್ಲಿ ಡಿಕೆಶಿ ಪ್ರಯತ್ನ ನಡೆಸುತ್ತಿದ್ದಾರೆ.
ಡಿಕೆ ಶಿವಕುಮಾರ್ ಅವರ ನಾಯಕತ್ವ ವಿಚಾರವಾಗಿ ಇಷ್ಟೊಂದು ಸೈಲೆಂಟ್ ಏಕೆ ಎಂಬ ವಿಚಾರ, ವಿರೋಧಿ ಪಾಳಯಕ್ಕೆ ಟೆನ್ಶನ್ ಶುರುವಾಗಿದೆ. ಮೌನದ ಹಿಂದೆ ತಂತ್ರಗಾರಿಕೆ ಅಡಗಿದೆ ಎಂದು ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹೈಕಮಾಂಡ್ ಸೂಚನೆಯಂತೆ ಡಿಕೆಶಿ ತಣ್ಣಗಾಗಿದ್ದಾರೆಂದೂ ಹೇಳುತ್ತಿದ್ದಾರೆ. ಯಾವುದಕ್ಕೂ ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಡಿಕೆಶಿ, ಇಲಾಖೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ನಡಿಗೆ ಕಾರ್ಯಕ್ರಮದ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಈ ನಡುವೆ ಪದೇ ಪದೇ ದೆಹಲಿಗೂ ತೆರಳುತ್ತಿದ್ದಾರೆ. ಡಿಕೆಶಿ ನಡೆಯ ಹಿಂದಿನ ಲೆಕ್ಕಾಚಾರ, ಏನು ಎಂಬುದು ವಿರೋಧಿ ಬಣಕ್ಕೆ ತಲೆನೋವು ಉಂಟು ಮಾಡಿದೆ.

