2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರು, ಗಣ್ಯರಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯ ಇದೆ. ಈ ಬಾರಿ, ಸಚಿವ ಶಿವರಾಜ್ ತಂಗಡಗಿ ಅವರು ಪ್ರಶಸ್ತಿಗೆ ಭಾಜನರಾಗಿರುವ, 70 ಸಾಧಕರ ಹೆಸರನ್ನು ಘೋಷಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ 6 ಸಾಧಕರು, ಜಾನಪದ ಮತ್ತು ಸಂಕೀರ್ಣ ಕ್ಷೇತ್ರದಲ್ಲಿ ತಲಾ 8 ಸಾಧಕರು, ಸಂಗೀತ, ವೈದ್ಯಕೀಯ, ಸಿನಿಮಾ, ಕೃಷಿ ಕ್ಷೇತ್ರ ಮತ್ತು ಎನ್‌ಆರ್‌ಐ ಕೆಟಗೆರಿಯಲ್ಲಿ ತಲಾ ಇಬ್ಬರು ಆಯ್ಕೆಯಾಗಿದ್ದಾರೆ. ನೃತ್ಯ, ಬಯಲಾಟ, ಸಹಕಾರ, ನ್ಯಾಯಾಂಗ, ಚಿತ್ರಕತೆ, ಕರಕುಶಲ ಮತ್ತು ಆಡಳಿತ ಕ್ಷೇತ್ರದಲ್ಲಿ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಸಮಾಜಸೇವೆಯಡಿ 8 ಸಾಧಕರು, ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಲಾ ನಾಲ್ವರು, ಯಕ್ಷಗಾನ, ಕ್ರೀಡಾ ಕ್ಷೇತ್ರ ಮತ್ತು ವಿಜ್ಞಾನ ತಂತ್ರಜ್ಞಾನದಡಿ ತಲಾ ಮೂವರು, ರಂಗಭೂಮಿಯಿಂದ ಐವರು, ಶಿಲ್ಪಕಲಾ ಕ್ಷೇತ್ರದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.
ನಟ ಪ್ರಕಾಶ್ ರಾಜ್, ನಟಿ ವಿಜಯಲಕ್ಷ್ಮೀ ಸಿಂಗ್, ಐಎಎಸ್ ಅಧಿಕಾರಿ ಸಿದ್ದಯ್ಯ, ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಪ್ಪ, ಸೂಲಗಿತ್ತಿ ಈರಮ್ಮ, ಮಾಧ್ಯಮ ಕ್ಷೇತ್ರದಲ್ಲಿ ಕೆ. ಸುಬ್ರಮಣ್ಯ, ಅಂಶಿ ಪ್ರಸನ್ನ ಕುಮಾರ್, ಬಿಎಂ ಹನೀಫ್, ಎಂ. ಸಿದ್ದರಾಜು ಸೇರಿದಂತೆ ಒಟ್ಟು 70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನ ಪ್ರಶಸ್ತಿ ನೀಡಲಾಗುತ್ತದೆ.
12 ಮಂದಿ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಕೆಲವರು ಸ್ವಯಂ ಮನವಿ ನೀಡಿದ್ರು. ಅಂತವರು ಅರ್ಹರಿದ್ದ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಶಿವರಾಜ ತಂಗಡಗಿ ಹೇಳಿದ್ದಾರೆ.

