ಚಿತ್ತಾಪುರ RSS ಪಥಸಂಚಲನ ವಿವಾದ, ನ.7ಕ್ಕೆ ವಿಚಾರಣೆ ಮುಂದೂಡಿಕೆ!

ಚಿತ್ತಾಪುರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನ ಕುರಿತ ಕಗ್ಗಂಟನ್ನು ಸೌಹಾರ್ದಯುತವಾಗಿ ಪರಿಹರಿಸಲು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ನವೆಂಬರ್ 5ರಂದು ಸಂಜೆ 5 ಗಂಟೆಗೆ ಮತ್ತೊಂದು ಶಾಂತಿ ಸಭೆ ನಡೆಸುವಂತೆ ಸೂಚಿಸಿದೆ.

ನ್ಯಾಯಮೂರ್ತಿ M.G.S. ಕಮಲ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಚಾರಣೆಯಲ್ಲಿ ಈ ನಿರ್ದೇಶನ ನೀಡಲಾಯಿತು. ವಿಚಾರಣೆ ವೇಳೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹಿಂದಿನ ಶಾಂತಿ ಸಭೆಗೆ ಅರ್ಜಿದಾರರು ಹಾಜರಾಗಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿ ಕಮಲ್ ಪ್ರಶ್ನೆ ಎತ್ತಿ, ಶಾಂತಿ ಸಭೆಯ ಮಹತ್ವವನ್ನು ಅರ್ಜಿದಾರರು ಯಾಕೆ ಅರಿಯಲಿಲ್ಲ? ಎಂದು ವಿಚಾರಿಸಿದರು.

ಅರ್ಜಿದಾರ ಪರ ವಕೀಲ ಅರುಣ ಶಾಮ್ ಅವರು, ಅರ್ಜಿದಾರರ ಕುಟುಂಬದಲ್ಲಿ ಮರಣ ಸಂಭವಿಸಿದ್ದರಿಂದ ಅವರು ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ, ಮತ್ತೊಮ್ಮೆ ಸಭೆ ನಡೆದರೆ ಖಂಡಿತವಾಗಿಯೂ ಪಾಲ್ಗೊಳ್ಳುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮತ್ತೊಂದು ಸಭೆ ನಡೆಸುವುದಕ್ಕೆ ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದರು. ಆದಾದ ನಂತರ ಹೈಕೋರ್ಟ್, ನವೆಂಬರ್ 5 ರಂದು ಸಂಜೆ 5 ಗಂಟೆಗೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ಬೆಂಗಳೂರು ಕಚೇರಿಯಲ್ಲಿ ಶಾಂತಿ ಸಭೆ ನಡೆಸಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿತು.

ಜೊತೆಗೆ ಅರ್ಜಿದಾರರ ಪರ ವಕೀಲರು, ಸರ್ಕಾರದ ಪರ ವಕೀಲರು ಹಾಗೂ ಜಿಲ್ಲಾಧಿಕಾರಿ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಸೂಚನೆ ನೀಡಿತು. ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author