ಅಮೆರಿಕಾದಲ್ಲಿ ಸರಕುಗಳನ್ನು ಹೊತ್ತು ಸಾಗುತ್ತಿದ್ದ ಯುಪಿಎಸ್ ಕಾರ್ಗೋ ವಿಮಾನ ಪತನಗೊಂಡಿದೆ. ದುರಂತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ. ಕೆಂಟುಕಿಯ ಲೂಯಿಸ್ವಿಲ್ಲೆ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.
ಮೆಕ್ಡೊನೆಲ್ ಡೌಗ್ಲಾಸ್ md-11 ಕಾರ್ಗೋ ವಿಮಾನ ಹವಾಯಿಗೆ ಹೊರಟಿತ್ತು. ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ಕೆಳಗೆ ಅಪ್ಪಳಿಸಿ ಹೊತ್ತಿ ಉರಿದಿದೆ. ದುರಂತದಲ್ಲಿ 3 ಸಿಬ್ಬಂದಿ ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಎನ್ನಲಾಗಿದೆ.
ಸ್ಥಳೀಯರ ಕ್ಯಾಮೆರಾದಲ್ಲಿ ವಿಮಾನ ಪತನದ ವಿಡಿಯೋ ಸೆರೆಯಾಗಿದೆ. ವಿಮಾನ ಹಾರಾಟ ಆರಂಭಿಸುವಾಗ ಅದರ ಎಡಭಾಗದ ಇಂಜಿನ್ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ಇದಾದ ಕೇಲವೇ ಕ್ಷಣಗಳಲ್ಲಿ ವಿಮಾನ ನೆಲಕ್ಕಪ್ಪಳಿಸಿದೆ. ವಿಮಾನ ಸ್ಪೋಟಗೊಂಡು, ಬೆಂಕಿಯ ಕೆನ್ನಾಲಿಗೆ ಆಗಸದೆತ್ತರಕ್ಕೆ ಚಿಮ್ಮಿದೆ.
ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 3:45 ನಿಮಿಷಕ್ಕೆ ಸಂಭವಿಸಿದೆ ಎಂದು, ಫೆಡರಲ್ ವಿಮಾನಯಾನ ಆಡಳಿತ ತಿಳಿಸಿದೆ. ಇನ್ನು ವಿಮಾನ ಪತನಕ್ಕೆ ಕಾರಣವನ್ನು ನ್ಯಾಷನಲ್ ಟ್ರಾನ್ಸ್ಪೋರ್ಟೇಷನ್ ಸೇಫ್ಟಿ ಬೋರ್ಡ್ ತನಿಖೆ ನಡೆಸಬೇಕಿದೆ.

