ರಾಜ್ಯದಲ್ಲಿ ಒಂದು ಕಡೆ ಮಳೆ ಆರ್ಭಟ ಮುಂದುವರೆದಿದ್ದರೆ, ಇನ್ನೊಂದೆಡೆ ಚಳಿ ತನ್ನ ಪ್ರಭಾವ ತೋರಿಸುತ್ತಿದೆ. ನವೆಂಬರ್ ಮೊದಲ ವಾರದಲ್ಲೇ ಚಳಿ ಶುರುವಾಗಿದ್ದು, ಜನರು ಈಗಾಗಲೇ ನಡುಗುತ್ತಿದ್ದಾರೆ. ಬೆಳಗ್ಗೆ ವೇಳೆಯಲ್ಲಿ ಕೊರೆಯುವ ಚಳಿ, ಸಂಜೆ ವೇಳೆಯಲ್ಲೂ ತಂಪಾದ ಗಾಳಿ ಜನರನ್ನು ಕಾಡುತ್ತಿದೆ.
ಸಾಮಾನ್ಯವಾಗಿ ಚಳಿಗಾಲ ನವೆಂಬರ್ ಅಂತ್ಯದಲ್ಲಿ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮುಂಚೆಯೇ ಚಳಿಗಾಲದ ಲಕ್ಷಣಗಳು ಕಾಣಿಸಿಕೊಂಡಿವೆ. ಹವಾಮಾನ ಇಲಾಖೆ ಈ ಬಾರಿ ವಾಡಿಕೆಗಿಂತ ಹೆಚ್ಚು ಚಳಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಕಲಬುರಗಿ, ಬೀದರ್, ಬಾಗಲಕೋಟೆ, ವಿಜಯಪುರ, ರಾಯಚೂರು, ದಾವಣಗೆರೆ, ಕೊಪ್ಪಳ, ಹಾವೇರಿ, ಮೈಸೂರು, ಮಂಡ್ಯ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಾಪಮಾನ ತೀವ್ರವಾಗಿ ಇಳಿಯುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಬೆಳಗಿನ ವೇಳೆಯಲ್ಲಿ ಕೊರೆಯುವ ಚಳಿ ಜನರನ್ನು ಕಂಗೊಳಿಸುತ್ತಿದೆ. ಹವಾಮಾನ ಇಲಾಖೆ ಪ್ರಕಾರ, ನವೆಂಬರ್ 7 ರಿಂದ 10 ರವರೆಗೆ ಬೆಂಗಳೂರಿನಲ್ಲಿ ಮಳೆಯಿಲ್ಲದೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಹಗಲಿನ ತಾಪಮಾನ ಸುಮಾರು 30 ಡಿಗ್ರಿಯಲ್ಲಿದ್ದು, ರಾತ್ರಿ 19 ಡಿಗ್ರಿಗಳಲ್ಲಿ ಸ್ಥಿರವಾಗಲಿದೆ.
ಆದ್ರತೆಯ ಪ್ರಮಾಣ ಶೇಕಡಾ 90ರಿಂದ ಶೇಕಡಾ 75ಕ್ಕೆ ಇಳಿಯಲಿದೆ. ನವೆಂಬರ್ 6 ಮತ್ತು 7 ರಂದು ರಾಜ್ಯದ ಕೆಲವು ಭಾಗಗಳಲ್ಲಿ ಚದುರಿದ ಭಾರೀ ಮಳೆಯ ಸಾಧ್ಯತೆ ಇದೆ. ಬಿರುಗಾಳಿಯ ಗಾಳಿಯೊಂದಿಗೆ ಮಧ್ಯಮ ಪ್ರಮಾಣದ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ ಎಂದು ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

