ಕೊಲ್ಲೂರು ಮೂಕಾಂಬಿಕೆ ಹೆಸ್ರಲ್ಲಿ ಭಕ್ತರಿಗೆ ಕನ್ನ!

ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಲ್ಲಿ, ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಂದ ಹಣ ವಂಚನೆ ನಡೆಸುತ್ತಿರುವುದು ಬಯಲಾಗಿದೆ. ಸೈಬರ್ ಕಳ್ಳರ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ದೇವಾಲಯಕ್ಕೆ ಬರುವ ಭಕ್ತರು ಕೊಠಡಿ ಕಾಯ್ದಿರಿಸಲು ಬಳಸುವ ವೆಬ್‌ಸೈಟ್‌ ರೀತಿ, ನಕಲಿ ವೆಬ್‌ಸೈಟ್‌ ಕ್ರಿಯೇಟ್‌ ಮಾಡಲಾಗಿತ್ತು.

ಕರ್ನಾಟಕ ಟೆಂಪಲ್ ಅಕಮಡೇಶನ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆಯಲಾಗಿತ್ತು. ಈ ಸೈಟ್‌ನಲ್ಲಿ QR ಕೋಡ್ ಮತ್ತು ಫೋನ್‌ಪೇ ಪಾವತಿ ಆಯ್ಕೆಗಳು ನೀಡಲಾಗಿದ್ದು, ಮುಂಗಡ ಬುಕ್ಕಿಂಗ್ ಹೆಸರಿನಲ್ಲಿ ಹಣ ಪಡೆದು ಭಕ್ತರನ್ನು ವಂಚಿಸಲಾಗುತ್ತಿತ್ತು. ವಾಟ್ಸಾಪ್ ಮೂಲಕ QR ಕೋಡ್ ಕಳುಹಿಸಿ ಯುಪಿಐ ಪಾವತಿಗೆ ಸೂಚಿಸಿ, ಪಾವತಿ ಮಾಡಿದ ಭಕ್ತರಿಗೆ ನಕಲಿ ರಶೀದಿ ಕಳುಹಿಸಲಾಗುತ್ತಿತ್ತು. ಆದರೆ, ಭಕ್ತರು ಕೊಲ್ಲೂರಿಗೆ ಬಂದಾಗ ನೋಂದಣಿ ದಾಖಲೆ ಇಲ್ಲದೇ ಇರುವುದರಿಂದ ಸಂಕಷ್ಟಕ್ಕೀಡಾಗುತ್ತಿದ್ದರು.

ಈ ಘಟನೆ ದೇವಾಲಯದ ಆಡಳಿತಾಧಿಕಾರಿಗಳ ಗಮನಕ್ಕೆ ಬಂದ ತಕ್ಷಣ, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಾಲಯದ ಪಕ್ಕದಲ್ಲಿರುವ ಲಲಿತಾಂಬಿಕಾ ಅತಿಥಿ ಗೃಹದಲ್ಲಿ ಕೊಠಡಿ ಬುಕ್ ಮಾಡುವ ಹೆಸರಿನಲ್ಲಿ ಈ ನಕಲಿ ವೆಬ್‌ಸೈಟ್‌ ದಂಧೆ ನಡೆದಿರುವ ಬಗ್ಗೆ ಶಂಕಿಸಲಾಗಿದೆ.

ನಕಲಿ ವೆಬ್‌ಸೈಟ್‌ ಮೂಲಕ ವಂಚನೆ ಬಗ್ಗೆ ದೇವಾಲಯದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಎ-ಗ್ರೇಡ್ ದೇವಾಲಯಗಳಿಗೆ ಸರ್ಕಾರದಿಂದ ಅಧಿಕೃತ ವೆಬ್‌ಸೈಟ್ ಇದೆ. ಅದು ಕರ್ನಾಟಕ ಟೆಂಪಲ್ಸ್ ಅಕಮಡೇಶನ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸರ್ಕಾರಿ ಸೈಟ್‌ನಲ್ಲಿ ಯಾವುದೇ ಕ್ಯೂಆರ್ ಕೋಡ್ ಪಾವತಿ ವ್ಯವಸ್ಥೆ ಇಲ್ಲ. ಭಕ್ತರು ನಕಲಿ ಲಿಂಕ್‌ಗಳಿಗೆ ಹೋಗದೆ ಅಧಿಕೃತ ಸೈಟ್‌ನಿಂದ ಮಾತ್ರ ಬುಕಿಂಗ್ ಮಾಡಬೇಕೆಂದು ಮನವಿ ಮಾಡಿದ್ದಾರೆ.

2024ರ ಫೆಬ್ರವರಿ ತಿಂಗಳಲ್ಲಿಯೂ ಇದೇ ರೀತಿಯ ನಕಲಿ ಲಿಂಕ್ ಮೂಲಕ ಭಕ್ತರು ಮೋಸ ಹೋಗಿದ್ದ ಘಟನೆ ವರದಿಯಾಗಿತ್ತು. ಆಗ Kollur Devotees Trust ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಲಿಂಕ್ ಹರಡಲಾಗಿತ್ತು. ಮತ್ತೆ ಅದೇ ರೀತಿಯ ವಂಚನೆ ಪುನರಾವರ್ತನೆಯಾಗಿದ್ದು, ಸರ್ಕಾರ ಹಾಗೂ ಪೊಲೀಸರು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರು ಆಗ್ರಹಿಸಿದ್ದಾರೆ.

About The Author