ರಾಜ್ಯದಲ್ಲಿ ಕಬ್ಬು ಬೆಳೆಗಾರರು ರಣಕಹಳೆ ಮೊಳಗಿಸಿದ್ದು, ಕಾಂಗ್ರೆಸ್ ಸರ್ಕಾರದ ನಿದ್ದೆಗೆಡಿಸಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚರ್ಚಿಸಲು, ತುರ್ತು ಭೇಟಿಗೆ ಅವಕಾಶ ನೀಡುವಂತೆ, ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆಗೆ ರಾಜ್ಯ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೂ, ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಹೋಗುತ್ತಿದೆ. ಇದರಿಂದ ರೈತ ಸಮುದಾಯದಲ್ಲಿ ಪ್ರಕ್ಷುಬ್ಧತೆ ಹೆಚ್ಚಾಗಿದೆ.
ರೈತರ ಜೊತೆ ರಾಜ್ಯ ಸರ್ಕಾರ ಹಲವು ಸುತ್ತಿನ ಸಭೆ ನಡೆಸಿದೆ. ಶೇಕಡ 11.25 ರಿಕವರಿ ಇದ್ದರೆ, ಪ್ರತಿ ಟನ್‌ಗೆ 3,200 ರೂಪಾಯಿ ಮತ್ತು ಶೇಡ 10.25 ರಿಕವರಿ ದರ ಇದ್ದರೆ, ಪ್ರತಿ ಟನ್‌ಗೆ 3,100 ರೂ. ಪಾವತಿ ಮಾಡಬಹುದು. ಸಕ್ಕರೆ ಕಾರ್ಖಾನೆಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಈ ಸಲಹೆ ನೀಡಿದ್ದರು. ಇದರಲ್ಲಿ ಸಾರಿಗೆ ವೆಚ್ಚ ಹಾಗೂ ಕಟಾವು ವೆಚ್ಚ ಹೊರತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಇದಕ್ಕೆ ಒಪ್ಪದ ರೈತರು ಹೆದ್ದಾರಿ ಬಂದ್ ಹಾಗೂ ಇತರೆ ಹೋರಾಟ ಕ್ರಮಗಳನ್ನು ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಕೇಂದ್ರ ಸರ್ಕಾರ 2025-26 ಸಾಲಿಗೆ ಶೇಕಡ 10.25 ರಿಕವರಿ ಇದ್ದಲ್ಲಿ, ಪ್ರತಿ ಟನ್ ಕಬ್ಬಿಗೆ 3,550 ರೂ. ಎಫ್ಆರ್‌ಪಿ ದರ ನಿಗದಿ ಮಾಡಿದೆ. ಆದರೆ, ಕಟಾವು ವೆಚ್ಚ ಮತ್ತು ಸಾಗಾಟ ವೆಚ್ಚ ಪ್ರತಿ ಟನ್‌ಗೆ 800 ರೂ.ನಿಂದ 1,900 ರೂ.ನಷ್ಟು ಕಡಿತಗೊಳಿಸಿದ ಬಳಿಕ, ರೈತರಿಗೆ ಪ್ರತಿ ಟನ್‌ಗೆ ಕೇವಲ 2,600ರಿಂದ 3,000 ರೂ. ಮಾತ್ರ ಸಿಗುತ್ತಿದೆ.
ರಸಗೊಬ್ಬರ, ಕಾರ್ಮಿಕ, ನೀರಾವರಿ ಮತ್ತು ಸಾರಿಗೆ ವೆಚ್ಚದಲ್ಲಿನ ತೀವ್ರ ಹೆಚ್ಚಳದ ಕಾರಣ, ಕಬ್ಬು ಬೆಳೆಯುವುದು ಆರ್ಥಿಕವಾಗಿ ಕಷ್ಟ ಸಾಧ್ಯವಾಗುತ್ತಿದೆ. FRP ಮಾದರಿ, ಸಕ್ಕರೆ ಮೇಲೆ ಸ್ಥಿರ ಕನಿಷ್ಠ ಬೆಂಬಲ ಬೆಲೆ, ರಫ್ತು ನಿರ್ಬಂಧ ಮತ್ತು ಕಬ್ಬಿನಿಂದ ತೆಗೆಯುವ ಎಥೆನಾಲ್‌ನ ಅಲ್ಪ ಬಳಕೆ, ಈ ಸಮಸ್ಯೆಯ ಮೂಲವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಾಗಾಟ ವೆಚ್ಚ ಮತ್ತು ಕಟಾವು ವೆಚ್ಚ ಹೊರತಾಗಿ ಪ್ರತಿ ಟನ್‌ಗೆ ರೈತರು 3,500 ರೂ. ಬೆಲೆಗೆ ಬೇಡಿಕೆ ಇಡುತ್ತಿದ್ದಾರೆ. ಈ ಬೆಲೆಯಿಂದ ಕಬ್ಬು ಬೆಳೆಯಲು ಸಾಧ್ಯ ಎಂಬುದು ರೈತರ ಒತ್ತಾಯವಾಗಿದೆ. ರೈತರು ಮುಕ್ತ, ಪಾರದರ್ಶಕ ಬೆಲೆ ನಿಗದಿ ವ್ಯವಸ್ಥೆಯನ್ನು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಸಾಗಾಟ ಮತ್ತು ಕಟಾವು ವೆಚ್ಚ ಬಳಿಕ, ರೈತರಿಗೆ ಬೆಲೆ ನಿಗದಿ ಮಾಡಲು ರಾಜ್ಯಕ್ಕೆ ಅವಕಾಶ ನೀಡಬೇಕು ಅಥವಾ ಸಕ್ಕರೆ ಕಾರ್ಖಾನೆಗಳೇ ಕಟಾವು ಮತ್ತು ಸಾಗಾಟ ವೆಚ್ಚವನ್ನು ಭರಿಸುವುದನ್ನು, ಕಡ್ಡಾಯಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
FRPಗೆ ರಿಕವರಿ ದರ ಆಧಾರಿತ ರಿಯಾಯಿತಿ/ಪ್ರೀಮಿಯಂ ಮರುಮಾಪನಾಂಕ ಅವಕಾಶ ನೀಡಬೇಕು. ಸಕ್ಕರೆ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕೆ.ಜಿ.ಗೆ 231 ರೂಪಾಯಿಗೂ ಅಧಿಕ ನಿಗದಿಗೊಳಿಸಬೇಕು. ಮಾರಾಟವಾಗದ ದಾಸ್ತಾನುಗಳಿಂದ ಸಕ್ಕರೆ ಕಾರ್ಖಾನೆಗಳನ್ನು ಮುಕ್ತವಾಗಿಸಲು, ರಫ್ತುಗೆ ಅವಕಾಶ ನೀಡಬೇಕು ಮತ್ತು ವೇಗದ ಪಾವತಿ ವ್ಯವಸ್ಥೆಯನ್ನು ಅನುವು ಮಾಡಿಕೊಡಬೇಕು. ಕರ್ನಾಟಕದ ಸಕ್ಕರೆ ಉತ್ಪಾದನೆ ಆಧಾರದಲ್ಲಿ, ಎಥೆನಾಲ್ ಹಂಚಿಕೆ ಹೆಚ್ಚಳ ಮತ್ತು ಖರೀದಿ ಖಾತ್ರಿಯನ್ನು ನೀಡಬೇಕು. ಪ್ರಸಕ್ತ ಕಬ್ಬು ಹಂಗಾಮು ಮುಗಿಯುವ ತನಕ, ಕರ್ನಾಟಕದಲ್ಲಿ ಕಬ್ಬು ಪಾವತಿ ವ್ಯವಸ್ಥೆಯ ನಿಗಾವಣೆಗೆ, ಜಂಟಿ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು, ಪತ್ರದಲ್ಲಿ ಸಿಎಂ ಒತ್ತಾಯಿಸಿದ್ದಾರೆ.

