ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಆಕ್ರೋಶ ದಿನೇ ದಿನೇ ತೀವ್ರಗೊಳ್ಳುತ್ತಿದ್ದಂತೆ, ರಾಜಕೀಯ ವಲಯದಲ್ಲೂ ಆರೋಪ-ಪ್ರತ್ಯಾರೋಪಗಳ ಜ್ವಾಲೆ ಎದ್ದಿದೆ. ಪ್ರತಿಟನ್ ಕಬ್ಬಿಗೆ ₹3,500 ದರ ನಿಗದಿ ಮಾಡುವಂತೆ ರೈತರು ಬೀದಿಗಿಳಿದಿದ್ದಾರೆ. ಆದರೆ ಸಮಸ್ಯೆ ಬಗೆಹರಿಸುವ ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರವನ್ನು ದೂಷಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ತೀವ್ರ ಟೀಕೆಗೆ ಇಳಿದಿದ್ದಾರೆ.
ಸಾವಿರಾರು ರೈತರು ಏಳು ದಿನಗಳಿಂದ ಪ್ರತಿಭಟನೆಯಲ್ಲಿ ಇದ್ದರೂ ಸಿಎಂ ಕೇವಲ ಕೇಂದ್ರದ ಮೇಲೆ ಹೊಣೆ ಹಾಕುತ್ತಿದ್ದಾರೆ. ಆಡಳಿತ ನಡೆಸಲು ಆಗದಿದ್ದರೆ ತಕ್ಷಣ ರಾಜೀನಾಮೆ ನೀಡಿ ಹೊರಡಿ ಎಂದು X ನಲ್ಲಿ ಕಿಡಿ ಕಾರಿದ್ದಾರೆ. ಜೊತೆಗೆ, FRP ದರದ ಜೊತೆಗೆ ಪ್ರತಿ ಟನ್‌ಗೆ ₹500 ಪ್ರೋತ್ಸಾಹಧನ ಮತ್ತು ₹5,000 ಕೋಟಿ ರಿವಾಲ್ವಿಂಗ್ ಫಂಡ್ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ನಡುವೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಭೆ ವಿಫಲವಾಗಿದೆ. ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗಿನ ಮಾತುಕತೆ ಫಲಪ್ರದವಾಗಿಲ್ಲ. 1 ಟನ್ ಕಬ್ಬಿಗೆ 3,200 ರೂಪಾಯಿ ಜೊತೆಗೆ 200 ರೂಪಾಯಿ ಸೇರಿಸಿ, 3,400 ರೂಪಾಯಿ ಕೊಡಿ. frp ಹೊರತಾಗಿ ಕಟಾವು ಮತ್ತು ಸಾಗಾಣೆಯ ವೆಚ್ಚವನ್ನು ಪ್ರತ್ಯೇಕವಾಗಿ ಕೊಡುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿಲ್ಲ. ನೀವು ಹೇಳಿದಂತೆ ಕೇಳಿದ್ರೆ 1 ಟನ್‌ಗೆ 4 ಸಾವಿರ ರೂಪಾಯಿ ದಾಟುತ್ತದೆ. ಕಾರ್ಖಾನೆ ನಡೆಸಲು ಸಾಧ್ಯವಿಲ್ಲ ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಬೇಡಿಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮತ್ತೊಂದು ಸುತ್ತಿನ ಸಭೆ ನಡೆಸಲು ಸಿದ್ದು ನಿರ್ಧರಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

