ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡುತ್ತಿದ್ದ ವಿಚಾರಕ್ಕೆ, ಸುಪ್ರೀಂಕೋರ್ಟ್ ಕಟುವಾಗಿ ಟೀಕಿಸಿತ್ತು. ಬಳಿಕ ದರ್ಶನ್‌ಗೆ ಸಾಮಾನ್ಯ ಕೈದಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕೊಡಲಾಗ್ತಿದೆ. ಆದ್ರೀಗ ದರ್ಶನ್ ಹೊರತುಪಡಿಸಿ ಬೇರೆ ಕೈದಿಗಳಿಗೂ ರಾಜಾತಿಥ್ಯ ನೀಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅದರಲ್ಲೂ ವಿಕೃತ ಕಾಮಿ ಉಮೇಶ್ ರೆಡ್ಡಿ ಹಾಗೂ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನ ಆಗಿರುವ ನಟಿ ರನ್ಯಾ ರಾವ್ ಪ್ರಿಯಕರ ತರುಣ್ ರಾಜ್, ಜೈಲಿನಲ್ಲಿ ಬಿಂದಾಸ್ ಲೈಫ್ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಮೇಶ್ ರೆಡ್ಡಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಲೈಫ್ ನಡೆಸುತ್ತಿದ್ದಾನೆ. ಜೈಲಿನಲ್ಲಿ ಟಿವಿ, ಮೊಬೈಲ್ ಸೌಲಭ್ಯ ನೀಡಲಾಗಿದೆ. ಬೇಕಾದ ಅಡುಗೆ ಮಾಡಿಕೊಳ್ಳಲು ಜೈಲಿನೊಳಗೇ ಅಧಿಕಾರಿಗಳು ಸೌಲಭ್ಯ ಕಲ್ಪಿಸಿದ್ದಾರೆ. ಉಮೇಶ್ ರೆಡ್ಡಿ ಟಿವಿ ನೋಡ್ತಾ, ಆಂಡ್ರಾಯ್ಡ್ ಮತ್ತು ಕೀಪ್ಯಾಡ್ ಮೊಬೈಲ್‌ಗಳನ್ನಿಟ್ಟುಕೊಂಡು ಮಾತನಾಡುತ್ತಿರುವ ವೀಡಿಯೊ ವೈರಲ್ ಆಗಿದೆ.

ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನ ಆಗಿರುವ ರನ್ಯಾ ರಾವ್ ಪ್ರಿಯಕರ ತೆಲುಗು ಸಿನಿಮಾ ನಟ ತರುಣ್ ರಾಜ್ ಕೂಡ, ಬಿಂದಾಸ್ ಲೈಫ್ ಲೀಡ್ ಮಾಡ್ತಿದ್ದಾನೆ. ಮೊಬೈಲ್ ಜೊತೆಗೆ ಟಿವಿ ಸೌಲಭ್ಯ ಕಲ್ಪಿಸಿರೋದು ವೈರಲ್ ಆಗಿರುವ ವಿಡಿಯೋದಿಂದ ಬಯಲಾಗಿದೆ. ಕೈದಿಗಳ ರಾಜಾತಿಥ್ಯಕ್ಕೆ ಹೆಸರುವಾಸಿಯಾಗಿರುವ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು, ಸಿಬ್ಬಂದಿಗೆ, ಮತ್ತೆ ಸಂಕಷ್ಟ ಎದುರಾಗಿದೆ. ಕೇಂದ್ರ ಕಾರಾಗೃಹದಲ್ಲಿ ಕೆಲವು ಕೈದಿಗಳಿಗೆ ವಿಶೇಷ ಸೌಲಭ್ಯಗಳು ಲಭ್ಯವಾಗುತ್ತಿವೆ ಎಂಬುದು, ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಜೈಲುಗಳಲ್ಲಿ ವಿಶೇಷ ಸೌಲಭ್ಯಗಳನ್ನು ನೀಡದಂತೆ, ಸುಪ್ರೀಂ ಕೋರ್ಟ್ ಎಲ್ಲಾ ಜೈಲುಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರೂ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ. ಜೈಲು ಅಧಿಕಾರಿಗಳ ಧೋರಣೆ ಮತ್ತು ವ್ಯವಸ್ಥೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದೆ.

