ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವ ಕಾರಣಕ್ಕಾಗಿ ನೋಂದಣಿ ಮಾಡಿಸಿಕೊಳ್ಳಲಿಲ್ಲ ಎಂಬುದಕ್ಕೆ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಸಂಘ ಸ್ಥಾಪನೆಯ 100ನೇ ವರ್ಷದ ಅಂಗವಾಗಿ ಬೆಂಗಳೂರಿನ PES ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ನವಕ್ಷಿತಿಜ ಉಪನ್ಯಾಸದಲ್ಲಿ ಮಾತನಾಡಿ ಈ ಕುರಿತು ಸ್ಪಷ್ಟಪಡಿಸಿದರು.
ಆರ್‌ಎಸ್‌ಎಸ್‌ಗೆ ಕಾನೂನುಬದ್ದ ಮಾನ್ಯತೆ ಇಲ್ಲದೆ ಇದ್ದರೆ, ಸಂಘವನ್ನು ನಿಷೇಧಿಸಲು ಯಾಕೆ ಆಗ್ರಹಿಸುತ್ತಿದ್ದಾರೆ? ಎಂದು ಭಾಗವತ್ ಪ್ರಶ್ನಿಸಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ನಮ್ಮ ಸಂಘಟನೆ ಕಾನೂನು ಬದ್ದವಾಗಿದೆ ಎಂಬುದು ಮೂರು ಬಾರಿ ಸ್ಪಷ್ಟವಾಗಿದೆ. ಆದಾಯ ತೆರಿಗೆ ಇಲಾಖೆ ಮತ್ತು ನ್ಯಾಯಾಲಯಗಳು ಕೂಡಾ ಆರ್‌ಎಸ್‌ಎಸ್ ಅನ್ನು ಮಾನ್ಯ ಸಂಘಟನೆಯೆಂದು ಪರಿಗಣಿಸಿವೆ ಎಂದು ಹೇಳಿದರು.
ಕಾಂಗ್ರೆಸ್‌ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆಗಳಿಗೆ ಉತ್ತರಿಸಿದ್ದಾರೆ. ಸಂವಿಧಾನದಡಿ ಕಾರ್ಯನಿರ್ವಹಿಸುವ ಸಂಘಟನೆಯ ಮಾನ್ಯತೆ ಸರ್ಕಾರದ ನೋಂದಣಿಯಿಂದಷ್ಟೇ ನಿರ್ಧಾರವಾಗುವುದಿಲ್ಲ. 1925ರಲ್ಲಿ ಆರ್‌ಎಸ್‌ಎಸ್ ಸ್ಥಾಪನೆಯಾದಾಗ ದೇಶ ಬ್ರಿಟಿಷರ ಆಳ್ವಿಕೆಯಲ್ಲಿ ಇತ್ತು. ಆಗ ನಾವು ಬ್ರಿಟಿಷ್ ಸರ್ಕಾರದ ಬಳಿ ಹೋಗಿ ನೋಂದಣಿ ಮಾಡಿಸಬೇಕಿತ್ತೇ? ಎಂದು ಪ್ರಶ್ನಿಸಿದರು.
ಭಾರತ ಸರ್ಕಾರ ಸ್ವಾತಂತ್ರ್ಯದ ನಂತರ ನೋಂದಣಿಯನ್ನು ಕಡ್ಡಾಯಗೊಳಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಆರ್‌ಎಸ್‌ಎಸ್ ಅನ್ನು ಮೂರು ಬಾರಿ ನಿಷೇಧಿಸಲಾಯಿತು, ಆದರೆ ಪ್ರತಿ ಸಾರಿ ನ್ಯಾಯಾಲಯವು ನಿಷೇಧವನ್ನು ವಜಾಗೊಳಿಸಿತು. ಹಾಗಾಗಿ ಸರ್ಕಾರ ನಮ್ಮ ಅಸ್ತಿತ್ವವನ್ನು ಮಾನ್ಯಗೊಳಿಸಿದೆ. ಇಲ್ಲದಿದ್ದರೆ ಯಾರನ್ನು ನಿಷೇಧಿಸುತ್ತಿದ್ದರು? ಎಂದು ಪ್ರತಿಪ್ರಶ್ನೆ ಎಸೆದರು.
ತ್ರಿವರ್ಣ ಧ್ವಜದ ಕುರಿತು ಕೇಳಿಬಂದ ಆರೋಪಕ್ಕೂ ಭಾಗವತ್ ಸ್ಪಷ್ಟನೆ ನೀಡಿದರು. ಆರ್‌ಎಸ್‌ಎಸ್ ಕೇಸರಿ ಧ್ವಜವನ್ನು ‘ಗುರು’ ಎಂದು ಪರಿಗಣಿಸುತ್ತದೆ. ಆದರೆ ಭಾರತೀಯ ತ್ರಿವರ್ಣ ಧ್ವಜಕ್ಕೆ ನಾವು ಅತ್ಯಂತ ಗೌರವ ಕೊಡುತ್ತೇವೆ. ಧ್ವಜಕ್ಕೆ ನಮನ ಸಲ್ಲಿಸುತ್ತೇವೆ ಮತ್ತು ರಕ್ಷಿಸುತ್ತೇವೆ ಎಂದು ಹೇಳಿದರು.
ಕೊನೆಯಲ್ಲಿ, ದೇಶದ 142 ಕೋಟಿ ಜನರ ಮನಸ್ಸಿನಲ್ಲಿ ಒಂದೇ ದೇಶಭಕ್ತಿ ಮತ್ತು ಮೌಲ್ಯಗಳು ಬೆಳೆಯುವ ದಿನವೇ ಈ ದೇಶ ಹಿಂದೂ ರಾಷ್ಟ್ರವಾಗುತ್ತದೆ. ಅದು ಯಾವಾಗ ಸಾಧ್ಯವಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಅದಾಗುವವರೆಗೆ ನಮ್ಮ ಸಂಘಟನೆಯ ಕೆಲಸ ನಿರಂತರವಾಗಿ ನಡೆಯುತ್ತದೆ ಎಂದು ಭಾಗವತ್ ಹೇಳಿದರು.
ವರದಿ : ಲಾವಣ್ಯ ಅನಿಗೋಳ

