ಸಾರಿಗೆ ನೌಕರರಿಗೆ ಕಾದಿದೆ ಬಿಗ್ ಶಾಕ್. ಇನ್ಮುಂದೆ ಶಕ್ತಿ ಯೋಜನೆ ಬಗ್ಗೆ ಮಾತನಾಡಿದ್ರೆ ಹುಷಾರ್ ಅನ್ನೋಹಾಗಾಗಿದೆ. ರಾಜ್ಯದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಿರುವ ಸಾರಿಗೆ ನೌಕರರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ನಿಲುವು ತೆಗೆದುಕೊಂಡಿದೆ. ಮಹಿಳೆಯರ ಅಚ್ಚುಮೆಚ್ಚಿನ ಈ ಯೋಜನೆ ಕುರಿತು ಚಾಲಕರು, ನಿರ್ವಾಹಕರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ದೂರುಗಳು ಬಂದಿದ್ವು. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಈಗ ಖಡಕ್ ಆದೇಶ ಹೊರಡಿಸಿವೆ.
ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಗೆ ಎರಡು ವರ್ಷ ಪೂರ್ಣಗೊಂಡು, ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ಮಹಿಳೆಯರು ಸುಮಾರು 500 ಕೋಟಿಯಷ್ಟು ಬಾರಿ ಉಚಿತವಾಗಿ ಸಂಚಾರ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಯೋಜನೆ ಬಗ್ಗೆ ಕೆಲ ನೌಕರರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬ ಆಕ್ಷೇಪಣೆಗಳು ಅಧಿಕಾರಿಗಳವರೆಗೆ ತಲುಪಿವೆ.
ಪ್ರಯಾಣಿಕರಿಂದಲೂ ಇಂತಹ ವರ್ತನೆ ಕುರಿತು ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ನೌಕರರಿಗೆ ಎಚ್ಚರಿಕೆ ನೀಡಿದೆ. ಹೊರಡಿಸಲಾದ ಸುತ್ತೋಲೆ ಪ್ರಕಾರ, ಇನ್ನು ಮುಂದೆ ಶಕ್ತಿ ಯೋಜನೆ ವಿರುದ್ಧ ನೌಕರರು ಯಾವುದೇ ರೀತಿಯ ತಪ್ಪು ಕಾಮೆಂಟ್ ಅಥವಾ ಅಪಪ್ರಚಾರ ಮಾಡಬಾರದು. ಬಸ್‌ನಲ್ಲಿ ಪ್ರಯಾಣಿಕರ ಎದುರು ಬೇಕಾಬಿಟ್ಟಿಯಾಗಿ ಮಾತನಾಡಿದರೆ ಅಥವಾ ಯೋಜನೆಯನ್ನು ಕೆಟ್ಟದಾಗಿ ಚಿತ್ರಿಸಿದರೆ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಆದರೆ ಈ ಆದೇಶದಿಂದ ಸಾರಿಗೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಈ ಯೋಜನೆಯಿಂದ ಖಂಡಿತ ಪ್ರಯೋಜನವಾಗುತ್ತಿದೆ. ಆದರೆ ನಮ್ಮ ಸಮಸ್ಯೆಗಳಿಗೆ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂಬ ಆಗ್ರಹ ಸಾರಿಗೆ ನೌಕರರೊಳಗೆ ಹೆಚ್ಚಾಗಿದೆ.
ಒಟ್ಟಿನಲ್ಲಿ, ಶಕ್ತಿ ಯೋಜನೆ ಕುರಿತು ನಕಾರಾತ್ಮಕವಾಗಿ ಮಾತನಾಡಿದರೆ ನೌಕರರ ವಿರುದ್ಧ ಕ್ರಮ ಅನಿವಾರ್ಯ ಎಂದು ಸಾರಿಗೆ ನಿಗಮಗಳು ಸ್ಪಷ್ಟಪಡಿಸಿವೆ. ಇದರಿಂದ ಇಲಾಖೆಯೊಳಗೆ ಹೊಸ ವಿವಾದ ಎದ್ದಿದೆ.
ಆದ್ರೆ ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಅನ್ನೋದನ್ನ ಕಾದುನೋಡಬೇಕಿದೆ.
ವರದಿ : ಲಾವಣ್ಯ ಅನಿಗೋಳ



