ಕಾಡಾನೆ ಭೀಮ ಹಾಗೂ ಕ್ಯಾಪ್ಟನ್ ನಡುವಿನ ಕಾದಾಟದಲ್ಲಿ, ದಂತ ಮುರಿದುಕೊಂಡ ಭೀಮ, ಯಾರ ಕಣ್ಣಿಗೂ ಕಾಣದಂತೆ ನಾಪತ್ತೆಯಾಗಿದ್ದಾನೆ. ನವೆಂಬರ್ 9ರಂದು ಭಾನುವಾರ ಸಂಜೆ 6:30ರ ಸುಮಾರಿಗೆ, ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೆ ಬಿಕ್ಕೋಡು ಬಳಿ ಭೀಮ ಕಾಣಿಸಿಕೊಂಡಿದ್ದ.
ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಮರೆಯಾಗಿದ್ದಾನೆ. ದಂತ ಮುರಿದುಕೊಂಡ ಬಳಿಕ ಭೀಮನ ಆರೋಗ್ಯದ ಸ್ಥಿತಿ ಬಗ್ಗೆ ತಿಳಿಯಲು, ಭೀಮನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಭೀಮನ ಸುಳಿವು ಸಿಕ್ಕಿಲ್ಲ.
ಬಿಕ್ಕೋಡು ಬಳಿ 50ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಬೀಡುಬಿಟ್ಟಿದ್ದವು. ಕಾಡಾನೆಗಳನ್ನು ಕಾಡಿಗಟ್ಟಲು ಭೀಮ ಆನೆ ಹೊರಟಿತ್ತು. ಭೀಮ ಆನೆ ಜೊತೆ, ಕಾರ್ಯಪಡೆ ತಂಡ ಜೀಪಿನೊಂದಿಗೆ ಹೋಗಿತ್ತು. ಜಗಬೋರನಹಳ್ಳಿಗೆ ಬರುತ್ತಿದ್ದಂತೆ, ಕ್ಯಾಪ್ಟನ್ ಹೆಸರಿನ ಮತ್ತೊಂದು ಆನೆ ಎದುರಾಗಿದೆ.
ಈ ವೇಳೆ ಎರಡೂ ಆನೆಗಳ ನಡುವೆ ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಕಾದಾಟ ನಡೆದಿದೆ. ಆ ವೇಳೆ ಭೀಮನ 1 ದಂತ ತುಂಡಾಗಿದೆ. ಮದದಲ್ಲಿದ್ದ ಕ್ಯಾಪ್ಟನ್ ಆನೆ, ಮನೆಯ ಎದುರು ಇಟ್ಟಿದ್ದ ಪ್ಲಾಸ್ಟಿಕ್ ಪೈಪ್ ಹಾಗೂ ನೀರು ತುಂಬಿದ್ದ ಡ್ರಮ್ ಒಡೆದು ಹಾಕಿದೆ. ಪಕ್ಕದಲ್ಲಿದ್ದ ಎತ್ತಿನ ಗಾಡಿ, 4 ಎಕರೆಯಲ್ಲಿದ್ದ ಭತ್ತ, ಜೋಳ, ಕಾಫಿ ಬೆಳೆ, ತೋಟಗಳಲ್ಲಿ ತೆಂಗಿನ ಮರ, ಬಾಳೆ ಗಿಡಗಳಿಗೂ ಹಾನಿಯಾಗಿದೆ.
ಬಳಿಕ, ಆನೆ ಕಾರ್ಯಪಡೆ ಸಿಬ್ಬಂದಿ ಆನೆಗಳನ್ನು ಪ್ರತ್ಯೇಕಿಸಿ ಓಡಿಸಿದ್ದಾರೆ. ದಂತ ಮುರಿದುಕೊಂಡ ಭೀಮ ಆನೆ, ನರಳಾಡುತ್ತಾ ಕಾಡಿನೊಳಗೆ ಓಡಿ ಹೋಗಿತ್ತು.

