ರಾಜ್ಯಾದ್ಯಂತ ಮಳೆ ಆರ್ಭಟ ಈಗ ಕಡಿಮೆಯಾಗಿದ್ದು, ನ.11 ರಂದು ಸಂಪೂರ್ಣ ಕರ್ನಾಟಕದಲ್ಲಿ ಒಣಹವೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲ ದಿನಗಳಿಂದ ಆಗಾಗ ಮಳೆ ಕಾಣಿಸಿಕೊಂಡಿದ್ದರೂ, ಈಗ ವರುಣನ ಅಬ್ಬರಕ್ಕೆ ಸಂಪೂರ್ಣ ಬ್ರೇಕ್ ಬಿದ್ದಂತಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲೂ ಸಧ್ಯಕ್ಕೆ ಮಳೆಯ ಸಾಧ್ಯತೆ ಇಲ್ಲ. ವರುಣನ ವಿಶ್ರಾಂತಿಯ ಪರಿಣಾಮವಾಗಿ, ಈ ಪ್ರದೇಶಗಳಲ್ಲಿ ಆಕಾಶವು ಭಾಗಶಃ ಮೋಡ ಕವಿದಂತಿರಬಹುದು ಆದರೆ ಯಾವುದೇ ಭಾರೀ ಮಳೆಯ ನಿರೀಕ್ಷೆ ಇಲ್ಲ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿಯೂ ಇಂದು ಮಳೆ ಸಾಧ್ಯತೆ ಅತಿ ವಿರಳವಾಗಿದೆ. ಜನರು ದಿನನಿತ್ಯದ ಕಾರ್ಯಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಸಂಚರಿಸಬಹುದಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲೂ ಸಂಪೂರ್ಣ ಒಣಹವೆಯೇ ಇರಲಿದೆ. ವಾತಾವರಣ ಶಾಂತವಾಗಿದ್ದು, ತಾಪಮಾನದಲ್ಲಿ ಸ್ವಲ್ಪ ಏರಿಕೆ ಕಂಡುಬರುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗಾಳಿಯ ವೇಗ ಗಂಟೆಗೆ ಸುಮಾರು 5 ಕಿಮೀ ಇರಲಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಎರಡು ಮೂರು ದಿನಗಳ ಕಾಲವೂ ರಾಜ್ಯದಾದ್ಯಂತ ಒಣಹವೆ ಮುಂದುವರಿಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

