ನವೆಂಬರ್ 10ರ ಸೋಮವಾರ ಭಾರತದ ರಾಜಧಾನಿ ದಿಲ್ಲಿಯಲ್ಲಿ, ಕಾರು ಸ್ಫೋಟಗೊಂಡು 13 ಮಂದಿ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಇಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲೂ ಸ್ಫೋಟ ನಡೆದು, ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು ವಕೀಲರು ಎಂದು ಹೇಳಲಾಗ್ತಿದೆ.
ನಿಲ್ಲಿಸಿದ್ದ ವಾಹನದಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ನಿಂದ ಸ್ಫೋಟ ಸಂಭವಿಸಿರಬಹುದೆಂದು, ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗ್ತಿದೆ. ಆದ್ರೆ ಪೊಲೀಸರು ಆತ್ಮಾಹುತಿ ದಾಳಿ ಎಂದು ಶಂಕಿಸಿದ್ದಾರೆ.
ಇಸ್ಲಾಮಾಬಾದ್ ಜಿಲ್ಲಾ ನ್ಯಾಯಾಲಯದ ಪ್ರವೇಶದ್ವಾರದ ಬಳಿ ಕೆಲಸದ ವೇಳೆಯಲ್ಲಿ, ಮಧ್ಯಾಹ್ನ 12.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದ ಸುಮಾರು 6 ಕಿಲೋ ಮೀಟರ್ ದೂರಕ್ಕೂ ಕೇಳಿಸಿದೆ. ಸ್ಫೋಟದಿಂದಾಗಿ ಅಕ್ಕಪಕ್ಕದಲ್ಲೇ ಇದ್ದ ಹಲವಾರು ವಾಹನಗಳಿಗೂ ಹಾನಿಯುಂಟಾಗಿದೆ.
ದಕ್ಷಿಣ ವಜಿರಿಸ್ತಾನದ ಕೆಡೆಟ್ ಕಾಲೇಜು ವಾನಾದಲ್ಲಿ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ನಡೆಸಿದ ದಾಳಿಯನ್ನು, ಪಾಕಿಸ್ತಾನಿ ಭದ್ರತಾ ಪಡೆಗಳು ವಿಫಲಗೊಳಿಸಿವೆ. ಇದಾದ ಕೆಲವೇ ಗಂಟೆಗಳ ನಂತರ ಸ್ಫೋಟ ಸಂಭವಿಸಿದೆ ಎಂದು, ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಟಿಟಿಪಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಕಾಬೂಲ್ಗೆ ತಾಲಿಬಾನ್ ಮರಳಿದಾಗಿನಿಂದ ಪಾಕಿಸ್ತಾನದಲ್ಲಿ ತೆಹ್ರಿಕ್-ಇ-ತಾಲಿಬಾನ್ ಚಟುವಟಿಕೆಗಳು ಹೆಚ್ಚಿವೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧಗಳು ಹದಗೆಡುತ್ತಿರುವುದಕ್ಕೆ ಇದು ಪ್ರಮುಖ ಕಾರಣವಾಗಿದೆ, ಅಘ್ಘಾನಿಸ್ತಾನ ಟಿಟಿಪಿ ನಾಯಕರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಲಾಗಿದೆ.

