ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದಿಂದ ದೇಶದಾದ್ಯಂತ ಭದ್ರತಾ ಇಲಾಖೆಗಳಲ್ಲಿ ಚಟುವಟಿಕೆ ಹೆಚ್ಚಾಗಿದೆ. ಈ ಘಟನೆಯ ಬಳಿಕ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅದರ ಭಾಗವಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ವಿಶೇಷ ಸೂಚನೆ ನೀಡಿದೆ.
ಬೆಂಗಳೂರು ವಿಮಾನ ನಿಲ್ದಾಣ ಆಡಳಿತ ಮಂಡಳಿಯ ಪ್ರಕಟಣೆಯ ಪ್ರಕಾರ, ಹೆಚ್ಚುವರಿ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಪ್ರಯಾಣಿಕರ ಎಲ್ಲ ಸಾಮಾನು ಮತ್ತು ದಾಖಲಾತಿಗಳ ತಪಾಸಣೆ ಗಟ್ಟಿ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ತಮ್ಮ ವಿಮಾನದ ಪ್ರಯಾಣ ಸಮಯಕ್ಕಿಂತ ಕನಿಷ್ಠ 3 ಗಂಟೆಗಳ ಮುಂಚಿತವಾಗಿ ಏರ್‌ಪೋರ್ಟ್‌ಗೆ ಆಗಮಿಸುವಂತೆ ಮನವಿ ಮಾಡಲಾಗಿದೆ.
ಆಡಳಿತ ಮಂಡಳಿಯು ಭದ್ರತಾ ಪರಿಶೀಲನೆ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ತೀವ್ರ ತಪಾಸಣೆ ನಡೆಯುತ್ತಿರುವುದರಿಂದ ಪ್ರಯಾಣಿಕರು ಸಮಯಕ್ಕೆ ಮುಂಚಿತವಾಗಿ ಆಗಮಿಸಿದರೆ ಸಂಚಾರ ಸುಗಮವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದೆಹಲಿ ಕೆಂಪು ಕೋಟೆ ಬಳಿ ನಡೆದಿರುವ ಕಾರು ಸ್ಫೋಟ ಪ್ರಕರಣ ದೇಶದ ಮೇಲೆ ನಡೆದ ದಾಳಿಯಾಗಿದೆ. ಭಯೋತ್ಪಾದಕರ ಕೃತ್ಯ ಅನ್ನೋದಕ್ಕೆ ಹಲವು ದಾಖಲೆಗಳು ಲಭ್ಯವಾಗಿದೆ. ಈ ಕಾರು ಸ್ಫೋಟ ಪ್ರಕರಣದಲ್ಲಿ 10 ಮಂದಿ ಮೃತಪಟ್ಟಿದ್ದರೆ, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎನ್ಐಎ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಪ್ರಕರಣ ಸಂಬಂಧ ಕೆಲ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಕೆಂಪು ಕೋಟೆಯ ಬಳಿ ಸ್ಫೋಟ ಪ್ರಕರಣದಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ತಪಾಸಣೆ ಪ್ರಕ್ರಿಯೆಗಳು ನಡೆಯಲಿದೆ. ಅವಧಿಗಿಂತ ಮುಂಚಿತವಾಗಿ ಆಗಮಿಸುವಂತೆ ಮನವಿ ಮಾಡಿದೆ. ಇದರಿಂದ ನಿಮ್ಮ ಪ್ರಯಾಣಕ್ಕೂ ಅನುಕೂಲವಾಗಲಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮನವಿ ಮಾಡಲಾಗಿದೆ ಎಂದು ಬೆಂಳೂರು ವಿಮಾನ ನಿಲ್ದಾಣ ಆಡಳಿತ ಮಂಡಳಿ ಮನವಿ ಮಾಡಿದೆ.
ವರದಿ : ಲಾವಣ್ಯ ಅನಿಗೋಳ

