ಕೆಂಪು ಕೋಟೆ ಸ್ಫೋಟ ಪ್ರಕರಣ : ತನಿಖೆ NIA ಹೆಗಲಿಗೆ

ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿ, 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರದ ರಾಜಧಾನಿಯ ಹೃದಯಭಾಗದಲ್ಲೇ ನಡೆದ ಈ ಘಟನೆಯ ನಂತರ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಹಿಸಿಕೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಭದ್ರತಾ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸ್ಫೋಟವು ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದ ಹುಂಡೈ i20 ಕಾರಿನಲ್ಲಿ ನಡೆದಿದೆ. ಪ್ರಾಥಮಿಕ ಎಫ್‌ಎಸ್‌ಎಲ್ ವರದಿಗಳ ಪ್ರಕಾರ, ಅಮೋನಿಯಂ ನೈಟ್ರೇಟ್, ಇಂಧನ ತೈಲ ಮತ್ತು ಡಿಟೋನೇಟರ್‌ಗಳು ಸ್ಫೋಟಕ್ಕೆ ಬಳಸಲ್ಪಟ್ಟಿವೆ. ಘಟನೆಯ ನಂತರ ಎನ್‌ಐಎ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಪುರಾವೆ ಸಂಗ್ರಹಣೆ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮತ್ತು ಶಂಕಿತರ ಚಲನವಲನಗಳ ಪತ್ತೆ ಕಾರ್ಯಾಚರಣೆಯನ್ನು ಆರಂಭಿಸಿದೆ.

ಹುಂಡೈ i20 ಕಾರು ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆಯ ಹೊರಗೆ ಬೆಳಿಗ್ಗೆ 7.30ಕ್ಕೆ ಕಾಣಿಸಿಕೊಂಡಿತ್ತು ಹಾಗೂ 8.13ಕ್ಕೆ ಬದರ್ಪುರ್ ಟೋಲ್ ಬೂತ್ ಮೂಲಕ ದೆಹಲಿಗೆ ಪ್ರವೇಶಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳು ಅಕ್ಟೋಬರ್ 29ರಂದು ಈ ಕಾರು ಖರೀದಿಸಿದ ಜಮ್ಮು–ಕಾಶ್ಮೀರದ ಪುಲ್ವಾಮಾ ನಿವಾಸಿ 34 ವರ್ಷದ ವ್ಯಕ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ದೆಹಲಿ ಪೊಲೀಸರು ಪಹರ್‌ಗಂಜ್, ದರಿಯಾಗಂಜ್ ಹಾಗೂ ಹತ್ತಿರದ ಪ್ರದೇಶಗಳಲ್ಲಿನ ಹೋಟೆಲ್‌ಗಳಲ್ಲಿ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿ, ನಾಲ್ವರನ್ನು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಾ, ನಮ್ಮ ಏಜೆನ್ಸಿಗಳು ಶೀಘ್ರದಲ್ಲೇ ಸ್ಫೋಟದ ನಿಜವಾದ ಕಾರಣ ಪತ್ತೆಹಚ್ಚುತ್ತವೆ. ಹಿರಿಯ ಎಫ್‌ಎಸ್‌ಎಲ್ ತಂಡ ಈಗಾಗಲೇ ಸ್ಥಳಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ರಾಜಧಾನಿಯ ಪ್ರಮುಖ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳಲ್ಲಿ ಈಗ ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಜಾರಿಯಲ್ಲಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author