ಉತ್ತರದ 15 ಜಿಲ್ಲೆಗಳಿಗೆ ಅನ್ಯಾಯ : ಮತ್ತೆ ಪ್ರತ್ಯೇಕ ರಾಜ್ಯದ ಕೂಗು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಶಾಸಕ ರಾಜು ಕಾಗೆ ಅವರು ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಹೊಸ ಚರ್ಚೆಗೆ ತುತ್ತಾಗಿದ್ದಾರೆ. ತಮ್ಮ ಪತ್ರದಲ್ಲಿ ಅವರು ಉತ್ತರ ಕರ್ನಾಟಕದ 15 ಜಿಲ್ಲೆಗಳನ್ನು ಒಳಗೊಂಡಂತೆ ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರಗಳು ನಿರ್ಲಕ್ಷ್ಯ ತೋರಿಸುತ್ತಿವೆ ಎಂಬ ಆರೋಪವನ್ನು ರಾಜು ಕಾಗೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ವೇದಿಕೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದುವರಿಸಿಕೊಂಡು ಬಂದಿವೆ.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬೇಡಿಕೆಗಳನ್ನು ಈಡೇರಿಸಲಾಗದಿದ್ದರೆ, ಸುವರ್ಣ ವಿಧಾನಸೌಧದ ಮೇಲೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡುವ ಎಚ್ಚರಿಕೆ ನೀಡಲಾಗಿದೆ. ದಿವಂಗತ ಉಮೇಶ್ ಕತ್ತಿಯವರ ನಿಧನದ ನಂತರ, ಅವರ ಆಪ್ತ ಶಾಸಕರಾದ ರಾಜು ಕಾಗೆ ಇದೀಗ ಇದೇ ವಿಚಾರವನ್ನು ಮತ್ತೆ ಮುಂದಿಟ್ಟಿದ್ದಾರೆ. ಅವರು ಹೇಳುವಂತೆ — ರಾಜ್ಯದ ಜನಸಂಖ್ಯೆ 2.5 ಕೋಟಿಯಿಂದ ಈಗ 6.5 ಕೋಟಿಗೆ ಏರಿದೆ. ಜನಸಂಖ್ಯೆ ಹೆಚ್ಚಾದಂತೆ ರಾಜ್ಯವನ್ನು ವಿಭಜಿಸಿ ಎರಡು ರಾಜ್ಯಗಳಾಗಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ಎರಡು, ಉತ್ತರ ಪ್ರದೇಶದಲ್ಲಿ ಐದು, ಮತ್ತು ಮಹಾರಾಷ್ಟ್ರದಲ್ಲಿ ಮೂರು ಹೊಸ ರಾಜ್ಯಗಳು ರೂಪುಗೊಳ್ಳುವ ಸಾಧ್ಯತೆ ಇದೆ. ಇಡೀ ದೇಶದಲ್ಲಿ ಒಟ್ಟು 50 ರಾಜ್ಯಗಳು ನಿರ್ಮಾಣವಾಗಲಿವೆ ಎಂಬ ಚಿಂತನೆ ಕೇಂದ್ರ ಮಟ್ಟದಲ್ಲಿಯೂ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯವಾದಾಗ ನಾನು ಧ್ವನಿ ಎತ್ತಿದ್ದೇನೆ, ಮುಂದೆಯೂ ಎತ್ತುತ್ತೇನೆ. ಆ ಭಾಗದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ ಎಂದು ರಾಜು ಕಾಗೆ ಹೇಳಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರ ಮತ್ತೆ ರಾಜಕೀಯ ಚರ್ಚೆಗೆ ತುತ್ತಾಗಿದ್ದು, ಈ ಬಾರಿ ಶಾಸಕ ರಾಜು ಕಾಗೆಯ ಪತ್ರದಿಂದಾಗಿ ಈ ವಿಷಯ ಮತ್ತೊಮ್ಮೆ ರಾಜ್ಯ ರಾಜಕೀಯದ ಕೇಂದ್ರೀಯ ಅಂಶವಾಗಿ ಪರಿಣಮಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author