ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಕುರಿತ ಚರ್ಚೆ ತೀವ್ರಗೊಂಡಿದೆ. ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿ ಪ್ರಯಾಣ ಕೈಗೊಂಡಿದ್ದು, ಕಾಂಗ್ರೆಸ್ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಮೂಲಗಳ ಪ್ರಕಾರ, ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮುಚ್ಚುಮರೆಯ ಮಾತುಕತೆ ನಡೆಸಿದ್ದಾರೆ. ನಾಯಕತ್ವದ ಗೊಂದಲ, ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತಂತೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಯತೀಂದ್ರ ಸಿದ್ದರಾಮಯ್ಯ ಅವರು ಸತೀಶ್ ಪರವಾಗಿ ಇತ್ತೀಚೆಗೆ ಮಾಡಿದ ಹೇಳಿಕೆಗಳ ಬಳಿಕ, ಸಿಎಂ ಹುದ್ದೆಗೆ ಸತೀಶ್ ಹೆಸರು ಮತ್ತೆ ಚರ್ಚೆಯಲ್ಲಿತ್ತು. ಆದರೆ ಸತೀಶ್ ಜಾರಕಿಹೊಳಿ 2028ರಲ್ಲಿ ಸಿಎಂ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದ್ದರು. ಈ ನಡುವೆ, ಅವರು ದಿಢೀರ್ ದೆಹಲಿಗೆ ತೆರಳಿರುವುದು ಹೊಸ ರಾಜಕೀಯ ಅಲೆ ಎಬ್ಬಿಸಿದೆ.
ದೆಹಲಿಯಲ್ಲಿ ಎರಡು ದಿನಗಳ ಕಾಲ ವಾಸವಿದ್ದ ಸತೀಶ್, ಸುರ್ಜೇವಾಲಾ ಅವರೊಂದಿಗೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳುವ ಮೊದಲು, ಸತೀಶ್ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ.
ಆದರೆ, ಈ ಸುದ್ದಿಗೆ ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ, ದೆಹಲಿಗೆ ನಾನು ಎಂದಿನಂತೆ ಹೋಗುತ್ತೇನೆ. ಅದರಲ್ಲೇನೂ ವಿಶೇಷತೆ ಇಲ್ಲ. ಸುರ್ಜೇವಾಲಾ ಅವರನ್ನು ಭೇಟಿಯಾಗಿದ್ದೆ. ಆದರೆ ಯಾವುದೇ ವಿಶೇಷ ವಿಚಾರ ಪ್ರಸ್ತಾಪ ಆಗಿಲ್ಲ. ಚರ್ಚೆ ನಡೆದಿಲ್ಲ. ಅವಕಾಶ ಬಂದಾಗ ನೋಡೋಣ ಎಂದು ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿ ಅವರ ದಿಢೀರ್ ದೆಹಲಿ ಪ್ರವಾಸ ಮತ್ತು ಸುರ್ಜೇವಾಲಾ ಜೊತೆಗಿನ ಮಾತುಕತೆ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತ ಚರ್ಚೆಯ ಹಿನ್ನೆಲೆ, ಅವರ ಭೇಟಿಯು ರಾಜಕೀಯವಾಗಿ ಮಹತ್ವ ಪಡೆದಿದೆ.
ವರದಿ : ಲಾವಣ್ಯ ಅನಿಗೋಳ

