ಮೇಕೆದಾಟು ಯೋಜನೆಗೆ ತಮಿಳುನಾಡು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ರಾಜ್ಯದ ಜನರ ಪ್ರಾರ್ಥನೆ ಫಲಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಮ್ಮ ನೀರು ನಮ್ಮ ಹಕ್ಕು, ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಮೇಕೆದಾಟು ಅಣೆಕಟ್ಟು ಯೋಜನೆ ರಾಜ್ಯದ ಸದುದ್ದೇಶಕ್ಕಾಗಿ ಮಾಡಲಾಗುತ್ತಿದ್ದು, ಈ ತೀರ್ಪು ಯೋಜನೆ ಮುಂದುವರಿಸಲು ಸಹಕಾರಿಯಾಗಲಿದೆ ಎಂದು ಡಿಕೆಶಿ ಹೇಳಿದ್ದಾರೆ. ಈ ಯೋಜನೆಯಿಂದ ತಮಿಳುನಾಡಿಗೂ ತನ್ನ ಪಾಲಿನ ನೀರು ದೊರಕುವುದರಿಂದ ಯಾವುದೇ ಹಾನಿ ಇಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ಜಲ ಆಯೋಗ ಈ ವಿಷಯದಲ್ಲಿ ಬಗೆಹರಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿರುವುದನ್ನು ಉಲ್ಲೇಖಿಸಿ, ಯೋಜನೆಗೆ ಅನುಮತಿ ನೀಡದೇ ಕೇಂದ್ರ ಆಯೋಗಕ್ಕೆ ಬೇರೆ ಆಯ್ಕೆಗಳಿಲ್ಲ, ಹೀಗಾಗಿ ನಮಗೆ ನ್ಯಾಯ ದೊರೆಯಲೇಬೇಕು ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
ವರದಿ : ಲಾವಣ್ಯ ಅನಿಗೋಳ

