ಶಬರಿಮಲೆ ಯಾತ್ರಿಕರಿಗೆ ಕೇರಳ ಸರ್ಕಾರ ಮೂಗಿಗೆ ನೀರು ತಾಕದಂತೆ ನಿಗಾ ವಹಿಸಿ ಅಂತ ಎಚ್ಚರಿಕೆಯನ್ನ ನೀಡಿದೆ. ಕಾರಣ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ನವೆಂಬರ್ 17ರಿಂದ ಪ್ರಾರಂಭವಾಗಲಿರುವ ಶಬರಿಮಲೆ ಯಾತ್ರೆಯ ಕುರಿತು ರಾಜ್ಯ ಸರ್ಕಾರದಿಂದ ಹೊಸ ಆರೋಗ್ಯ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಯಾತ್ರಿಕರು ನದಿಗಳು ಹಾಗೂ ಕುಡಿಯುವ ನೀರಿನ ಮೂಲಗಳಲ್ಲಿ ಸ್ನಾನ ಮಾಡುವಾಗ ಮೂಗಿನೊಳಕ್ಕೆ ನೀರು ಪ್ರವೇಶಿಸದಂತೆ ವಿಶೇಷ ಎಚ್ಚರಿಕೆ ವಹಿಸಲು ಸರ್ಕಾರ ಸೂಚಿಸಿದೆ. ಅಮೀಬಾ ಸೋಂಕು ನೀರಿನ ಮೂಲಕ ಮೂಗಿನೊಳಗೆ ಜಾರುವ ಸಾಧ್ಯತೆ ಇದ್ದು, ಇದು ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ಎಚ್ಚರಿಸಿದೆ.
ಯಾತ್ರೆಗೆ ಬರುವಾಗ ಮೊದಲು ಅನುಸರಿಸಬೇಕಾದ ಸೂಚನೆಗಳನ್ನ ನೋಡೋದಾದ್ರೆ ಅಗತ್ಯ ಔಷಧಿಗಳನ್ನು ನಿಮ್ಮೊಂದಿಗೆ ತೆಗೆದುಕೊಂಡಿರಬೇಕು. ಯಾತ್ರೆ ಆರಂಭಕ್ಕೂ ವಾಕಿಂಗ್ ಅಭ್ಯಾಸ ಆರಂಭಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಬೆಟ್ಟ ಹತ್ತುವಾಗ ಯಾವುದೇ ಧಾವಂತ ಮಾಡದೇ ನಿಧಾನವಾಗಿ, ವಿಶ್ರಾಂತಿ ತೆಗೆದುಕೊಂಡು ಮುಂದುವರಿಯಬೇಕು.
ಇನ್ನು ಆರೋಗ್ಯ ಸಹಾಯ ಬೇಕಿದ್ದಲ್ಲಿ ಅಲ್ಲಿನ ಸಿಬ್ಬಂದಿಯನ್ನು ಕೂಡಲೇ ಸಂಪರ್ಕಿಸಬೇಕು. ಒಂದು ವೇಳೆ ಹಾವು ಕಚ್ಚಿದಲ್ಲಿ ತಕ್ಷಣವೇ ಸಿಬ್ಬಂದಿ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸೂಚಿಸಿದೆ. ಯಾತ್ರಿಕರು ಬಯಲು ಬಹಿರ್ದೆಸೆಯನ್ನು ನಿಷೇಧಿಸಲಾಗಿದೆ.
ಜೊತೆಗೆ ನಿಗದಿತ ಸ್ಥಳಗಳಲ್ಲಿಯೇ ಶೌಚಕರ್ಮ ಮುಗಿಸಿ, ಅಗತ್ಯ ಸಾಬೂನಿನಿಂದ ಕೈತೊಳೆದುಕೊಳ್ಳಬೇಕೆಂದಿದೆ. ಇದೇ ವೇಳೆ ಯಾತ್ರಿಕರು ಕೇವಲ ಬಿಸಿ ನೀರನ್ನು ಕುಡಿಯಬೇಕಾಗಿ ಹೇಳಿದೆ. ಇದೆ ವಿಚಾರವಾಗಿ ಕೇರಳ ಸರ್ಕಾರ ತುರ್ತು ಪರಿಸ್ಥಿತಿ ಇದ್ದಲ್ಲಿ 0473 5203 232 ಈ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ

