ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಹಲವು ಸಚಿವರಿಗೆ ಟೆನ್ಶನ್ ಶುರುವಾಗಿದೆ. ಎರಡು ವರ್ಷಗಳ ಅವಧಿ ಪೂರೈಸುತ್ತಿರುವ ಕೆಲವು ಸಚಿವರಿಗೆ ಸಿಎಂ ಸಿದ್ದರಾಮಯ್ಯ ‘ಕೊಕ್’ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ಪಕ್ಷದೊಳಗೆ ಚರ್ಚೆ ಜೋರಾಗಿದೆ. ನಾಳೆ ಮತ್ತೆ ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಹಾಗೂ ಸುರ್ಜೀವಾಲಾ ಜೊತೆ ಸಮಾಲೋಚನೆ ನಡೆಸಿ, ಸಂಪುಟದಿಂದ ಕೈಬಿಡುವವರ ಪಟ್ಟಿಯನ್ನ ಅಂತಿಮಗೊಳಿಸಲಿದ್ದಾರೆ.
ಯಾರ್ಯಾರಿಗೆ ಸ್ಥಾನ ಕಳೆದುಕೊಳ್ಳುವ ಭೀತಿ? ಎದುರಾಗಿದೆ ಅನ್ನೋದನ್ನ ನೋಡೋದಾದ್ರೆ ಮಾಹಿತಿ ಪ್ರಕಾರ ಸಚಿವ ರಹೀಂ ಖಾನ್, ಶರಣ ಪ್ರಕಾಶ್ ಪಾಟೀಲ್, ಡಿ.ಸುಧಾಕರ್, ಲಕ್ಷ್ಮೀಹೆಬ್ಬಾಳ್ಕರ್, N.S.ಬೋಸರಾಜು, ಮಧುಬಂಗಾರಪ್ಪ ಸೇರಿದಂತೆ ಹಲವರಿಗೆ ಕೊಕ್ ಕೊಡುವ ಸಾಧ್ಯತೆಯಿದೆ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಅಭಯ ನೀಡಿರುವುದರಿಂದ ನಾಯಕತ್ವ ಬದಲಾವಣೆಯ ಮಾತಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಕುತೂಹಲ ಜೋರಾಗಿದೆ.
ಸಿಎಂನ ಆಪ್ತರನ್ನು ತನ್ನ ವಿಶ್ವಾಸಕ್ಕೆ ಪಡೆಯುವ ಕಾರ್ಯತಂತ್ರ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಲೆಕ್ಕಾಚಾರಗಳು ಮತ್ತು ಜಿಲ್ಲೆ–ತಾಲೂಕು–GBA ಚುನಾವಣೆಗಳಿಗೆ ಪಕ್ಷವನ್ನು ಬಲಪಡಿಸುವ ಕೆಲಸ ಈಗ ಅವರ ಮುಂದಿದೆ.
ವರದಿಗಳ ಪ್ರಕಾರ, 2028ರ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಿ ತಾವು ಹೊರಹೊಮ್ಮಲು ಡಿಕೆಶಿ ದೀರ್ಘಕಾಲೀನ ಸ್ಟ್ರಾಟಜಿ ರೂಪಿಸಿದ್ದಾರೆ. ಮತ್ತು ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಜೊತೆ ಉತ್ತಮ ಬಾಂಧವ್ಯ ಮುಂದುವರೆಸಲು ತೀರ್ಮಾನಿಸಿದಂತಿದೆ.
ವರದಿ : ಲಾವಣ್ಯ ಅನಿಗೋಳ

