ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕಳೆದ ಕೆಲವು ವಾರಗಳಿಂದ ವಿಚಾರ ಕಗ್ಗಂಟಾಗಿತ್ತು. ಆದರೆ ಇತ್ತೀಚೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ, ಭಾನುವಾರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಶಾಂತಿಯುತವಾಗಿ ಸಂಪನ್ನವಾಯಿತು.
ಗಣವೇಶಧಾರಿಗಳು ತಮ್ಮ ಸಂಪ್ರದಾಯಬದ್ಧ ಗಣವೇಷದಲ್ಲೇ ಉತ್ಸಾಹದಿಂದ ಪಾಲ್ಗೊಂಡಿದ್ದು, ಸಂವಿಧಾನ ಗೆದ್ದಿದೆ. ಇಂದು ನಾವು ಪಥಸಂಚಲನ ಮಾಡುತ್ತಿದ್ದೇವೆ ಎಂದು ಆನಂದ ವ್ಯಕ್ತಪಡಿಸಿದರು. ಕಲಬುರಗಿ ಪೀಠವು ಪಥಸಂಚಲನಕ್ಕೆ ಅಧಿಕೃತ ಅನುಮತಿ ನೀಡಿದಂತೆ, ಚಿತ್ತಾಪುರ ಪಟ್ಟಣ ಕೇಸರಿ ಧ್ವಜಗಳಿಂದ ಮೆರೆದಿದೆ. ಬಹುತೇಕ ರಸ್ತೆಗಳಲ್ಲಿ ಕೇಸರಿ ಬಾವುಟಗಳು ಹಾರಾಡುತ್ತಿದ್ದು, ಪೊಲೀಸ್ ಭದ್ರತೆ ಸರ್ಪಗಾವಲಿ ಮಾದರಿಯಲ್ಲಿ ವ್ಯವಸ್ಥೆಯಾಗಿತ್ತು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಭದ್ರಕೋಟೆ ಎಂದೇ ಕರೆಯುವ ಈ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸುಮಾರು 300ಕ್ಕೂ ಹೆಚ್ಚು ಗಣವೇಶಧಾರಿಗಳು ಮತ್ತು 50ಕ್ಕೂ ಹೆಚ್ಚು ಘೋಷ ವಾದಕರು ಭಾಗವಹಿಸಿದ್ದರು. ಪಥಸಂಚಲನಕ್ಕೆ ಪುಷ್ಪಾರ್ಚನೆ ಮಾಡಿ ಭಾಗವಹಿಸಿದವರಿಗೆ ಜನತೆ ಸ್ವಾಗತ ಸಲ್ಲಿಸಿದರು.
ಕಳೆದ ಒಂದು ತಿಂಗಳಿನಿಂದ ಪಥಸಂಚಲನ ವಿಚಾರ ಚರ್ಚೆಯಲ್ಲಿತ್ತು. ಸಂಘರ್ಷ, ಆರೋಪ-ಪ್ರತ್ಯಾರೋಪ, ಹಾಗೂ ಕಾನೂನು ಪ್ರಕ್ರಿಯೆಗಳ ನಡುವೆ ಕೊನೆಗೂ ಪಥಸಂಚಲನ ಭಾನುವಾರ ಮಧ್ಯಾಹ್ನ ಭದ್ರತೆ ನಡುವೆಯೇ ನಿರ್ವಿಘ್ನವಾಗಿ ನಡೆಯಿತು. ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಪಥಸಂಚಲನ ವೀಕ್ಷಿಸಲು ಪಟ್ಟಣದ ಪ್ರಮುಖ ರಸ್ತೆಗಳು ಜನಸಂದಣಿಯಿಂದ ತುಂಬಿಕೊಂಡಿದ್ದವು.
ಜಿಲ್ಲಾಡಳಿತವು ಷರತ್ತುಬದ್ದ ಅನುಮತಿ ನೀಡಿದ್ದು, ಹೈಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಎಲ್ಲ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿತ್ತು. ಪೂರ್ತಿ ಕಾರ್ಯಕ್ರಮವು ಶಿಸ್ತುಬದ್ಧವಾಗಿ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಜರುಗಿದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಮತ್ತು ಪೊಲೀಸರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ

