ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಹುಲ್ ಗಾಂಧಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಪಾರ್ಟ್ ಟೈಂ ರಾಜಕಾರಣಿ, ಚುನಾವಣೆ ಬಂದಾಗ ಮಾತ್ರ ಭಾರತಕ್ಕೆ ಬಂದು, ನಂತರ ವಿದೇಶ ಪ್ರವಾಸಕ್ಕೆ ತೆರಳುವವರಂತು ಅವರ ಟೀಕೆ. ವರನಟ ಡಾ. ರಾಜ್ ಕುಮಾರ್ ರಂಗಮಂದಿರದ ಬಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಧಿ ಕುಟುಂಬದ ವಿರುದ್ಧ ಗರಂ ಆದರು.
ಕಾಂಗ್ರೆಸ್ ಗೆದ್ದರೆ ಇವಿಎಂ ಸರಿಯಂತೆ, ಬಿಜೆಪಿ ಅಥವಾ ಬೇರೆ ಪಕ್ಷ ಗೆದ್ದರೆ ತಕ್ಷಣ ಇವಿಎಂ ದೋಷದ ಕಥೆ! ಇವರ ‘ಮತ ಚೋರಿ’ ನಾಟಕವನ್ನು ದೇಶದ ಜನರು ನಂಬುತ್ತಿಲ್ಲ. ಬಿಹಾರ ಚುನಾವಣಾ ಫಲಿತಾಂಶದ ನಂತರ ರಾಹುಲ್ ಗಾಂಧಿ ಸಂಪೂರ್ಣವಾಗಿ ಡಮ್ಮಿ ನಾಯಕ ಎಂದು ಜನರು ಗುರುತಿಸಿರುವ ಸ್ಥಿತಿ ಬಂದಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಅಶೋಕ್, ಸಿಎಂ ಸಿದ್ದರಾಮಯ್ಯ ಈಗ ಸಂಪೂರ್ಣ ಪ್ರಾಬಲ್ಯ ಪಡೆದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ “ಬಿಹಾರ ಸ್ಟ್ರಾಟಜಿ” ಬೇರೇನೂ ವರ್ಕ್‌ಔಟ್ ಆಗಲಿಲ್ಲ ಎಂದು ವ್ಯಂಗ್ಯವಾಡಿದರು. ಡಿಕೆಶಿ ಶಿವ ಮತ್ತು ವಿಷ್ಣುವನ್ನಾದರೂ ನೋಡಿದ್ದು ಸಾಕು, ಈಗ ಬಾಕಿ ಇರುವುದು ಬ್ರಹ್ಮನನ್ನ ನೋಡುವುದಷ್ಟೇ. ಬಿಹಾರ ಫಲಿತಾಂಶದಿಂದ ಕಾಂಗ್ರೆಸ್ ಒಳಗಡೆ ಎಲ್ಲವೂ ಉಲ್ಟಾ ಆಗಿದೆ ಎಂದು ಕಟುವಾಗಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಕೇವಲ ಕರ್ನಾಟಕದಲ್ಲಿ ಮಾತ್ರ ಉಳಿದಿದೆ ಎಂದು ಅವರು ಒತ್ತಿಹೇಳಿದರು. ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡೋದು ಇಲ್ಲ, ಡಿಕೆಶಿ ಸುಮ್ನೆ ಇರೋದು ಇಲ್ಲ… ಇವರಿಬ್ಬರ ಘರ್ಷಣೆಯಿಂದಲೇ ಸರ್ಕಾರ ಬಿದ್ದು ಹೋಗುವ ಸಾಧ್ಯತೆ ಇದೆ ಎಂದು ಹೇಳಿದರು. ಮಧ್ಯಂತರ ಚುನಾವಣೆಯ ಪರಿಸ್ಥಿತಿ ರಾಜ್ಯದಲ್ಲಿ ಬರಬಹುದು ಎಂದು ಅಶೋಕ್ ಸ್ಪಷ್ಟಪಡಿಸಿದರು. ಬರುವ ಚುನಾವಣೆ ಎದುರಿಸಲು ಬಿಜೆಪಿ ಜೆಡಿಎಸ್ ಒಟ್ಟಾಗಿ, ಒಗ್ಗಟ್ಟಾಗಿ ಸಿದ್ಧವಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

