ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಜಾರಿಗೊಂಡಿದ್ದ ಗಡಿಪಾರು ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಜಾರಿಗೊಂಡಿದ್ದ ಗಡಿಪಾರು ಕ್ರಮವನ್ನು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿಕೊಂಡು, ಗಡಿಪಾರು ಆದೇಶವನ್ನು ರದ್ದುಪಡಿಸಿ ಹೊಸದಾಗಿ ವಿಚಾರಣೆ ನಡೆಸುವಂತೆ ಸೂಚಿಸಿದೆ.
ಪುತ್ತೂರು ಉಪ ವಿಭಾಗಾಧಿಕಾರಿ ಸೂಕ್ತ ಕಾರಣಗಳು ಹಾಗೂ ಸಂಬಂಧಿತ ವಿಧಿಗಳ ಆಧಾರದಲ್ಲಿ ಪುನರ್ವಿಚಾರಣೆ ನಡೆಸಿ, 15 ದಿನಗಳ ಒಳಗೆ ತಾಜಾ ಆದೇಶ ಹೊರಡಿಸಲು ನ್ಯಾಯಾಲಯ ನಿರ್ದೇಶಿಸಿದೆ.
ಧರ್ಮಸ್ಥಳ ಬುರುಡೆ ಪ್ರಕರಣ ಮತ್ತು ಸೌಜನ್ಯ ಪ್ರಕರಣಗಳಲ್ಲಿ ಹೋರಾಟ ಮಾಡುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮಂಗಳೂರಿನಿಂದ ಗಡಿಪಾರು ಮಾಡಲು ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಈ ವರ್ಷದ ಸೆಪ್ಟೆಂಬರ್ 20ರಂದು ಆದೇಶ ಹೊರಡಿಸಿದ್ದರು.
ಅವರ ವಿರುದ್ಧ ಸುಮಾರು 32 ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಗಡಿಪಾರು ಮಾಡಲು ಆಗ್ರಹಗಳು ವ್ಯಕ್ತವಾಗಿದ್ದವು. ಇದರ ಆಧಾರದ ಮೇಲೆ ಅವರಿಗೆ ಒಂದು ವರ್ಷದ ಕಾಲ ರಾಯಚೂರಿನ ಮಾನ್ವಿ ತಾಲೂಕಿನಲ್ಲೇ ವಾಸಿಸುವಂತೆ ಆಡಳಿತ ಆದೇಶಿಸಿತ್ತು. ಆದರೆ ಈ ಕ್ರಮ ಅಸಂಗತವೆಂದು ತಿಮರೋಡಿ ಹೈಕೋರ್ಟ್ ಮೊರೆ ಹೋಗಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

