ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿವೆ. ನವೆಂಬರ್ 15ರಂದು ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜಕೀಯ ಚರ್ಚೆಗಳಲ್ಲಿ ತೊಡಗಿದ್ದರು. ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಮುಂದೆ ಸಂಪುಟ ಪುನರ್‌ರಚನೆ ಪ್ರಸ್ತಾಪ ಮುಂದಿರಿಸಿದ್ದರೆ, ಡಿಕೆ ಶಿವಕುಮಾರ್ ಮಾತ್ರ ದೆಹಲಿಯಲ್ಲೇ ತಂಗಿ ಲಾಬಿ ಮುಂದುವರಿಸಿದ್ದಾರೆ.
ಡಿಕೆ ಬ್ರದರ್ಸ್‌ಗಳ ದೆಹಲಿ ತಂತ್ರ ಸಭೆ ಮತ್ತೆ ಕುತೂಹಲ ಹೆಚ್ಚಿಸಿದೆ. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ 50 ನಿಮಿಷಕ್ಕೂ ಹೆಚ್ಚು ಸುದೀರ್ಘ ಚರ್ಚೆ ನಡೆಸಿದ್ದಾರೆ. ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ-ಪುನರ್‌ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ—ಎಲ್ಲವೂ ಚರ್ಚೆಯಲ್ಲಿದ್ದವು ಎನ್ನಲಾಗಿದೆ. ಆದರೂ ಡಿಕೆ, ನಮ್ಮ ಭೇಟಿಗೆ ಬೇರೆ ಅರ್ಥ ಬೇಡ ಎಂದು ಹೇಳಿ ರಾಜಕೀಯ ತಾಪಮಾನವನ್ನು ಇನ್ನೂ ಹೆಚ್ಚಿಸಿದ್ದಾರೆ.
ಇನ್ನೂ ಇಂದು ದೆಹಲಿಗೆ ಬಂದ ಸಿಎಂ ಸಿದ್ದರಾಮಯ್ಯರನ್ನು ಡಿಕೆ ಶಿವಕುಮಾರ್ ಭೇಟಿಯಾದ್ದರಿಂದ ರಾಜಕೀಯ ಸಮೀಕರಣಗಳು ಮತ್ತಷ್ಟು ರೋಚಕವಾಗಿವೆ. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದು, ರಾಜಕೀಯ ವಲಯ ಕಾದುನೋಡುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

