ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯಗಳಿಸಿದ ಹಿನ್ನೆಲೆ, ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜನೆಗೆ ಅನುಮೋದನೆ ದೊರೆಯಿತು. ನವೆಂಬರ್ 19ರಂದು ಅಧಿಕೃತವಾಗಿ ವಿಧಾನಸಭೆ ವಿಸರ್ಜಿಸಲಾಗುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಪತ್ರ ಸಲ್ಲಿಸಿದ್ದಾರೆ. ಇದರಿಂದ ಹೊಸ ಸರ್ಕಾರ ರಚನೆ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.
ಈ ನಡುವೆ, ಮುಖ್ಯಮಂತ್ರಿಗಳ ಕಚೇರಿ ಮತ್ತು ರಾಜಭವನದ ನಡುವೆ ಭದ್ರತೆ ಕಟ್ಟುಕಠಿಣಗೊಳಿಸಲಾಗಿತ್ತು. ಸಂಪುಟ ಸಭೆ ಮುಗಿದ ತಕ್ಷಣ ನಿತೀಶ್ ಕುಮಾರ್ ನೇರವಾಗಿ ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದರು. ಎನ್‌ಡಿಎಗೆ ದೊರೆತ ಸ್ಪಷ್ಟ ಬಹುಮತದ ಹಿನ್ನೆಲೆಯಲ್ಲಿ, ಹೊಸ ಸರ್ಕಾರ ರಚಿಸಲು ತಾವು ಅರ್ಹರೆಂದು ನಿತೀಶ್ ಅವರು ರಾಜ್ಯಪಾಲರಿಗೆ ಹಕ್ಕು ಮಂಡಿಸಿದ್ದಾರೆ.
2005ರಿಂದ ದಾಖಲೆ 10ನೇ ಬಾರಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದು, ನವೆಂಬರ್ 20ರಂದು ಗಾಂಧಿ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಹಲವು ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿ ಸೇರಿ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

