ಕರ್ನಾಟಕ ರಾಜ್ಯ ರಾಜಕಾರಣದ ಆಟ ದೆಹಲಿಯಲ್ಲಿ ಜೋರಾಗಿದೆ. ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ತೀವ್ರವಾಗುತ್ತಿದ್ದಂತೆ ಸಂಪುಟ ಸರ್ಜರಿ ವಿಚಾರ ಮತ್ತಷ್ಟು ವೇಗ ಪಡೆದಿದೆ. ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ–ಸೋನಿಯಾ ಗಾಂಧಿ ಭೇಟಿ ಮೂಲಕ ಸಂಪುಟ ಪುನರ್‌ರಚನೆಗೆ ಗ್ರೀನ್ ಸಿಗ್ನಲ್ ಪಡೆದಿದ್ದರು. ರಾಹುಲ್ ಗಾಂಧಿ ಕೂಡ ಖರ್ಗೆ ಅವರಿಗೆ ಸಂಪುಟ ಪುನಾರಚನೆ ಮುಂದುವರೆಯಬೇಕು ಎಂದು ಸೂಚನೆ ನೀಡಿದ್ದರೆಂಬ ಮಾಹಿತಿ ದೊರಕಿದೆ.
ಈ ಹಿನ್ನೆಲೆಯಲ್ಲಿ ಇಂದು ಮತ್ತೆ ದೆಹಲಿಗೆ ಹಾರಿದ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ದೆಹಲಿಗೆ ಹೊರಡುವ ಮುನ್ನ ಸಿಎಂ ನಿವಾಸದಲ್ಲಿ ಕಾಂಗ್ರೆಸ್ ನಾಯಕರು, ಒಬ್ಬರಾದ ಮೇಲೆ ಒಬ್ಬರು ಭೇಟಿ ನೀಡಿದ್ದು, ಪ್ರದೀಪ್ ಈಶ್ವರ್, ಅಶೋಕ್ ಪಟ್ಟಣ್, ಕಾಶಪ್ಪನವರ್, ಪೊನ್ನಣ್ಣ ಮತ್ತು ಮಾಜಿ ಸಚಿವ ಕೆ.ಎನ್. ರಾಜಣ್ಣ ಸೇರಿ ಹಲವರು ಖಾಸಗಿ ಮಾತುಕತೆ ನಡೆಸಿದರು. ವಿಶೇಷವಾಗಿ ಸಿಎಂ–ರಾಜಣ್ಣ ನಡುವೆ ನಡೆದ 20 ನಿಮಿಷಗಳ ಪ್ರತ್ಯೇಕ ಸಭೆ ರಾಜಕೀಯ ಕುತೂಹಲ ಹೆಚ್ಚಿಸಿದೆ.
ಇದರ ಮಧ್ಯೆ ಸಿಎಂ ಹಾಗೂ ಸಚಿವ ಮಹದೇವಪ್ಪ ನಡುವೆ ಸಪರೇಟ್ ಮೀಟಿಂಗ್ ಏಕೆ? ಎನ್ನುವ ಪ್ರಶ್ನೆಗೆ ಸಿಎಂ ನಗೆ ಚಿಮ್ಮುತ್ತಲೇ ಒಳ–ಹೊರ ಅಂತರ ಇಲ್ಲ, ದೆಹಲಿಗೆ ಹೋಗಿ ಮಾತಾಡಿ ಬರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಇಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೂ ಭೇಟಿ ಮಾಡಿ, ಕಬ್ಬು ಬೆಳೆಗಾರರು ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

